ಹಣ್ಣು ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಯುವ ರೈತ

Update: 2024-10-08 07:46 GMT

ಮಂಡ್ಯ: ಮಳೆ ಆಶ್ರಿತ ಪ್ರದೇಶ ನಾಗಮಂಗಲ ತಾಲೂಕು ಹರಳಕೆರೆ ಗ್ರಾಮದ ಯುವ ರೈತ ಎಚ್.ಎಸ್.ಚನ್ನೇಗೌಡ, ಸಾವಯವ ಬೇಸಾಯ ಕ್ರಮದಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ವಾರ್ಷಿಕ ಸುಮಾರು 15 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದಾರೆ.

ಎರಡು ಎಕರೆ ಜಮೀನಿನಲ್ಲಿ ಒಂದು ಕೊಳವೆಬಾವಿ ನೆರವಿನಿಂದ ಬಿಳಿಸೀಬೆ, ಕಪ್ಪು ಸೀಬೆ, ತೈವಾನ್ ಪಿಂಕ್ ಸೀಬೆಗಳ ಒಂದು ಸಾವಿರ ಗಿಡಗಳನ್ನು ಬೆಳೆಸಿದ್ದಾರೆ. ಇದರ ಜತೆಗೆ 50 ಬಿಳಿ ನೇರಳೆ, ಕಪ್ಪು ನೇರಳೆ, ಜಂಬೂನೇರಳೆ ಗಿಡಗಳು, 50 ತೈವಾನ್ ನಿಂಬೆಯ ಗಿಡಗಳು, 40 ಮೂಸಂಬಿ ಗಿಡಗಳು, 20 ಲೀಚಿ ಗಿಡಗಳು, 20 ಬಿಳಿ ಮತ್ತು ಕೆಂಪು ವಾಟರ್ ಆ್ಯಪಲ್ ಗಿಡಗಳು, 80 ಬೆಣ್ಣೆ ಹಣ್ಣಿನ ಗಿಡ, 30 ಎರಳೆಕಾಯಿ ಗಿಡಗಳು, 25 ಲಕ್ಷ್ಮಣ ಫಲ ಗಿಡಗಳು ಇವೆ.

ಇದಲ್ಲದೆ, ಚೆರ್ರಿ, ಊಟಿ ಸೇಬು, ಮರಸೇಬು, ವಾಲ್‌ನೆಟ್, ಸ್ಟಾರ್ ಫ್ರೂಟ್, ಬೆಟ್ಟದ ನೆಲ್ಲಿಕಾಯಿ, ಆಲ್‌ಸ್ಪೇಸ್ ಗಿಡ, ಡ್ರಾಗನ್ ಫ್ರೂಟ್, ಸೀತಾಫಲ, ರಾಮಫಲ ಸೇರಿದಂತೆ 25 ಹೆಚ್ಚು ಬಗೆಯ ಹಣ್ಣುಗಳ ಗಿಡಗಳಿಂದಲೂ ಚನ್ನೇಗೌಡರು ಆದಾಯ ಪಡೆಯುತ್ತಿದ್ದಾರೆ.

ನೀರಿನ ಮಿತಬಳಕೆಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ತೋಟದಲ್ಲಿ ಕಳೆ ನಿಯಂತ್ರಿಸಲು ಮಲ್ಲಿಂಗ್ ಮಾದರಿಯ ಉಳುಮೆ ಮಾಡುತ್ತಾರೆ. ಗಿಡಗಳಿಗೆ ಉಂಟಾಗುವ ಕೀಟಬಾಧೆಯನ್ನು ತಪ್ಪಿಸಲು ಕ್ರಿಮಿನಾಶಕಗಳನ್ನು ಬಳಸದೇ ಬೇವಿನ ಎಣ್ಣೆ, ಉಳಿ ಮಜ್ಜಿಗೆ, ನಾಟಿ ಹಸುವಿನ ಗಂಜಲವನ್ನು ಸಿಂಪಡಣೆ ಮಾಡುತ್ತಾರೆ. ಎರೆಹುಳು ಮತ್ತು ಹಸಿರು ಮತ್ತು ಒಣತಾಜ್ಯಗಳಿಂದ ಗೊಬ್ಬರ ತಯಾರು ಮಾಡಿಕೊಳ್ಳುತ್ತಾರೆ. ಎಮ್ಮೆ, ಹಸು, ಮೇಕೆ, ಕುರಿಗಳನ್ನು ಸಾಕಿದ್ದು, ಇವುಗಳ ಗೊಬ್ಬರವನ್ನು ಬಳಸುತ್ತಾರೆ. ರಾಸಾಯನಿಕ ಗೊಬ್ಬರ ಬಳಸುವುದಿಲ್ಲ.

ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಹಣ್ಣುಗಳಿಗೆ ಚನ್ನೇಗೌಡ ಸ್ಥಳೀಯವಾಗಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಆನ್‌ಲೈನ್ ಮೂಲಕವೂ ವಹಿವಾಟು ನಡೆಸುತ್ತಾರೆ. ಗ್ರಾಹಕರ ಮನೆ ಬಾಗಿಲಿಗೆ ಹಣ್ಣುಗಳನ್ನು ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ತರಕಾರಿ ಬೆಳೆಯಲ್ಲಿ ನಷ್ಟ ಅನುಭವಿಸಿದ ನಂತರ ಹಣ್ಣಿನ ಬೇಸಾಯ ಮಾಡುವ ಚಿಂತನೆ ಬಂತು. ತರಬೇತಿ ಪಡೆದಿರಲಿಲ್ಲ. ಯುಟ್ಯೂಬ್‌ನಲ್ಲಿ ಬೇಸಾಯದ ವೀಡಿಯೊಗಳನ್ನು ನೋಡಿ ಹಣ್ಣಿನ ಬೇಸಾಯ ಮಾಡಲು ಶುರು ಮಾಡಿದೆ. ಈಗ ದಿನಕ್ಕೆ ನೂರಾರು ಕೆ.ಜಿ. ಸೀಬೆ ಬೆಳೆದು ಮಾರುಕಟ್ಟೆಗೆ ಒಯ್ಯುತ್ತೇನೆ.

-ಎಚ್.ಎಸ್.ಚನ್ನೇಗೌಡ, ರೈತ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News