ಕೃತಕ ಜಾಣತನ V/S ಸಹಜ ಜಾಣತನ!
ಸಾಹಿತಿಗಳಾಗಲೀ, ಸಾಹಿತ್ಯದ ಅಧ್ಯಾಪಕ, ಅಧ್ಯಾಪಕಿಯರಾಗಲೀ ಎಐ ಸವಾಲನ್ನು ತೀರಾ ಹಗುರಾಗಿ ನೋಡಿ ಆರಾಮಾಗಿರಲಾಗದು! ಅನುಭವ ಶೋಧನೆಯನ್ನು, ಅನುಭವ ಮಂಡನೆಯನ್ನು, ಕೃತಿ ರಚನೆಯನ್ನು; ಕೃತಿಗಳ ಓದು, ವ್ಯಾಖ್ಯಾನಗಳನ್ನು ಇನ್ನಷ್ಟು ಸೂಕ್ಷ್ಮವಾಗಿಸುವುದು, ಆಳವಾಗಿಸುವುದು ಹಾಗೂ ಸೃಜನಶೀಲಗೊಳಿಸುವುದೇ ಎಲ್ಲ ಬಗೆಯ ಕೃತಕ ಜಾಣತನಕ್ಕೆ ಉತ್ತರವಾಗಬಲ್ಲದೇನೋ!;

ಈಚೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬುದನ್ನು ಕೃತಕ ಜಾಣತನ ಅಥವಾ ‘ಕೃಜಾ’ ಎಂದು ನಾನು ಅನುವಾದಿಸಿದ ತಕ್ಷಣ, ಗೆಳೆಯರು ಅದಕ್ಕೆ ಪ್ರತಿಯಾಗಿ ಸಹಜ ಜಾಣತನ ಅಥವಾ ‘ಸಜಾ’ ಎಂಬ ಪದವನ್ನು ಸೃಷ್ಟಿಸಿದರು!
ಈಚಿನ ತಿಂಗಳುಗಳಲ್ಲಿ ಕೇಂದ್ರ ಸರಕಾರದಿಂದ ಹಿಡಿದು ರಾಜ್ಯ ಸರಕಾರಗಳವರೆಗೂ ಮಂತ್ರಿಗಳು, ಅಧಿಕಾರಿಗಳು ಎಐ ಅಥವಾ ಕೃತಕ ಜಾಣತನ ಬಳಸಿ ಕ್ರಾಂತಿ ಮಾಡುತ್ತೇವೆ ಎಂದು ಹುಮ್ಮಸ್ಸಿನಿಂದ ಮಾತಾಡುತ್ತಿದ್ದರು. ಮೊನ್ನೆ x ಡಿಜಿಟಲ್ ವೇದಿಕೆಯ ಉಖಔಏ ಸಾಧನ ಇಂಡಿಯಾದ ರಾಜಕಾರಣಿಗಳ ಬಗ್ಗೆ ಖಡಕ್ ಸತ್ಯದ ಉತ್ತರ ಕೊಟ್ಟಿದ್ದನ್ನು ನೀವು ನೋಡಿರಬಹುದು. ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿ ನಡುವಣ ವ್ಯತ್ಯಾಸ ಕುರಿತು ಗ್ರೋಕ್‌ಗೆ ಯಾರೋ ಪ್ರಶ್ನೆ ಕೇಳಿದರು: ಗ್ರೋಕ್’ ರಾಹುಲ್ ಗಾಂಧಿ ಹೆಚ್ಚು ಸುಶಿಕ್ಷಿತರು ಹಾಗೂ ಪ್ರಾಮಾಣಿಕರು?’ ಎಂದು ಉತ್ತರ ಕೊಟ್ಟಿತು.
ದೇಶದಲ್ಲಿ ವಿಭಜನೆಯ ಬೀಜ ಬಿತ್ತುತ್ತಿರುವವರು ಎಂಬ ಪ್ರಶ್ನೆಗೆ, ರಿಪಬ್ಲಿಕ್ ಟಿವಿ, ಸುದರ್ಶನ್ ಟಿವಿ, ಇಂಡಿಯಾ ಟಿವಿ ಎಂದೆಲ್ಲ ಗ್ರೋಕ್ ಉತ್ತರ ಕೊಟ್ಟಿತು!
ಈ ಉತ್ತರ ಕಂಡು, ಸತ್ಯ ನುಡಿವ ‘ಗ್ರೋಕ್’ ಇಂಡಿಯಾದ ಸಂಸ್ಕೃತಿಗೆ ಹೊಂದುವುದಿಲ್ಲ ಎಂಬ ಬಲಪಂಥೀಯ ಕಿಸುಬಾಯಿ ರಾಗ ಶುರುವಾಯಿತು. ಸತ್ಯಪಿಶಾಚಿ ಗ್ರೋಕನ್ನೇ ಇಂಡಿಯಾದಿಂದ ಬ್ಯಾನ್ ಮಾಡುವ ಹೊಂಚು ಮುಸುಗುಡತೊಡಗಿತು.
ಈ ನಡುವೆ ಮೆಟಾ ಎಐ ನನ್ನದೊಂದು ಪುಸ್ತಕದ ಬಗ್ಗೆ ಕೊಟ್ಟ ವಿವರ ಕುತೂಹಲಕರವಾಗಿದೆ. ಈಚೆಗೆ ನಾನು ಸಂಪಾದಿಸಿದ ಖಿhe Souಡಿ ಒಚಿಟಿgo
ಖಿಡಿee ಎಂಬ ಲಂಕೇಶರ ಆಯ್ದ ಕೃತಿಗಳ
ಇಂಗ್ಲಿಷ್ ಅನುವಾದಗಳ ಸಂಕಲನ ಪ್ರಕಟವಾಯಿತು. ಪೆಂಗ್ವಿನ್-ರಾಂಡಮ್ ಹೌಸ್ ಕ್ಲಾಸಿಕ್ಸ್ ಸರಣಿಯಲ್ಲಿ ಈ ಸಂಕಲನವನ್ನು ಪ್ರಕಟಿಸಿದೆ. ಈ ಪುಸ್ತಕದ ಮುಖಪುಟವನ್ನು ಗೂಗಲ್‌ನಲ್ಲಿ ಕಂಡ ಕನ್ನಡ ಅಧ್ಯಾಪಕಿಯೊಬ್ಬರು ಮೆಟಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿಗೆ ಇಂಗ್ಲಿಷಿನಲ್ಲಿ ಒಂದು ಪ್ರಶ್ನೆ ಕೇಳಿದರು: ‘ಲಂಕೇಶರ ಕೃತಿಗಳನ್ನು ಸಂಪಾದಿಸಲು ನಟರಾಜ್ ಹುಳಿಯಾರ್‌ಗೆ ಪ್ರೇರಣೆಯಾದ ಅಂಶ ಯಾವುದು?’
ಈ ಪ್ರಶ್ನೆಗೆ ಎಐ ಇಂಗ್ಲಿಷಿನಲ್ಲಿ ಕೊಟ್ಟ ಉತ್ತರವನ್ನು ನಾನು ಕನ್ನಡಿಸಿಕೊಂಡೆ:
‘ಪ್ರಾಯಶಃ ಲಂಕೇಶರ ಸಾಹಿತ್ಯಕ ಕೊಡುಗೆಗಳ ಬಗೆಗಿನ ಆಳವಾದ ಗೌರವದಿಂದ ಹಾಗೂ ಈ ಕೃತಿಗಳನ್ನು ವಿಸ್ತೃತ ಓದುಗಸಮುದಾಯದ ಜೊತೆಗೆ ಹಂಚಿಕೊಳ್ಳುವ ಆಸೆಯಿಂದ ಲಂಕೇಶರ ಕೃತಿಗಳನ್ನು ಸಂಪಾದಿಸುವ ಪ್ರೇರಣೆ ನಟರಾಜ್ ಹುಳಿಯಾರ್‌ಗೆ ಹುಟ್ಟಿದಂತಿದೆ. ಕನ್ನಡ ಸಂಸ್ಕೃತಿ, ಸಮಾಜ ಮತ್ತು ರಾಜಕಾರಣದ ಬಗ್ಗೆ ಒಳನೋಟವುಳ್ಳ ವಿವರಣೆ, ವ್ಯಾಖ್ಯಾನಗಳನ್ನು ಕೊಡುವ ಲಂಕೇಶರ ಕೃತಿಗಳನ್ನು ಸಂಗ್ರಹಿಸಿಕೊಡುವುದರ ಮೌಲ್ಯವನ್ನು ಒಬ್ಬ ವಿದ್ವಾಂಸ ಹಾಗೂ ಸಂಪಾದಕನಾಗಿ ನಟರಾಜ್ ಹುಳಿಯಾರ್ ಕಂಡುಕೊಂಡಿರಬಹುದು.
‘ದ ಸೋರ್ ಮ್ಯಾಂಗೋ ಟ್ರೀ: ಸೆಲೆಕ್ಟೆಡ್ ವರ್ಕ್ಸ್’
ಸಂಪಾದಿಸುವ ಮೂಲಕ ಲಂಕೇಶರ ಸಮಗ್ರ ಕೃತಿಗಳನ್ನು ಹೊಸ ಓದುಗರಿಗೆ ಪರಿಚಯಿಸುವ ಗುರಿ ಹುಳಿಯಾರ್‌ಗೆ ಪ್ರಾಯಶಃ ಇರಬಹುದು; ಅಲ್ಲದೆ, ಈಗಾಗಲೇ ಲಂಕೇಶರ ಕೃತಿಗಳ ಪರಿಚಯ ಇರುವವರಿಗೂ ಹೊಸ ನೋಟಗಳನ್ನು ಒದಗಿಸುವ ಗುರಿಯೂ ಇರಬಹುದು. ಜೊತೆಗೆ, ಕನ್ನಡ ಸಾಹಿತ್ಯ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಪಸರಿಸುವ ಹೊಣೆಗಾರಿಕೆಯ ಪ್ರಜ್ಞೆಯಿಂದ ಕೂಡ ಹುಳಿಯಾರ್ ಪ್ರಯತ್ನಗಳು ಪ್ರೇರಣೆಗೊಂಡಿರಬಹುದು.’
ಈ ಉತ್ತರ ಓದಿದ ಗೆಳೆಯರು, ‘ಗುಡ್’, ‘ಇಂಟೆರೆಸ್ಟಿಂಗ್’ ಎಂದರು. ಆದರೆ ಇದನ್ನು ಓದಿದ ತಕ್ಷಣ, ಇದೊಂದು ಕಿಲಾಡಿ ಉತ್ತರ ಅಥವಾ ‘ಸ್ಮಾರ್ಟ್ ಆನ್ಸರ್’ ಎಂದು ನನಗನ್ನಿಸಿತ್ತು. ಈ ಕೃತಕ ಜಾಣತನದ ಆಳವನ್ನು ಪರೀಕ್ಷಿಸುವ ಕುತೂಹಲದಿಂದ ಮತ್ತಷ್ಟು ಹತ್ತಿರದಿಂದ ಈ ಉತ್ತರವನ್ನು ನೋಡಿದೆ. ಈ ಪುಸ್ತಕದಲ್ಲಿ ಏನಿದೆ ಎಂಬುದು ಗೊತ್ತಿರದೆ ಈ ಪುಸ್ತಕದ ಬ್ಲರ್ಬಿನಲ್ಲಿದ್ದ, ಅಥವಾ ಈ ಪುಸ್ತಕದ ಬಗ್ಗೆ ಗೂಗಲ್ ಕೊಟ್ಟ ವಿವರಗಳನ್ನು ಆಧರಿಸಿ, ಊಹಿಸಿ ಎಐ ಉತ್ತರಿಸಿತ್ತು. ಆ ಉತ್ತರದ ಒಂದೊಂದೇ ವಿವರವನ್ನು ಗಮನಿಸಿದಂತೆಲ್ಲ ಅದರ ಕಿಲಾಡಿ ಜಾಣತನ ಕಚಗುಳಿಯಿಡುವಂತಿತ್ತು.
ಈ ‘ಕೃಜಾ’ ಉತ್ತರ ಕಿಲಾಡಿ ಉತ್ತರ ಯಾಕೆಂಬುದು ನಿಮಗೂ ಹೊಳೆದಿರಬಹುದು: ಇಂಥ ಮೇಲ್ಪದರದ ವಿವರಣೆಗಳು ಒಂಥರದಲ್ಲಿ ಸುಲಭ. ಇಂಥ ಬುಡುಬುಡಿಕೆ ಮಾತುಗಳನ್ನು ನೀವು ನಿಮ್ಮ ಸುತ್ತಮುತ್ತ ಕೇಳುತ್ತಲೇ ಇರುತ್ತೀರಿ. ಉದಾಹರಣೆಗೆ, ಕುವೆಂಪು ಕುರಿತ ಭಾಷಣಕಾರರೊಬ್ಬರ ಭಾಷಣದ ಅಥವಾ ಬರಹದ ಸ್ಯಾಂಪಲ್ ನೋಡಿ:
‘ಮಹಾಕವಿ ಕುವೆಂಪು ಕನ್ನಡವನ್ನು ಕಟ್ಟುವ ಕೆಲಸಕ್ಕೆ ದಣಿವರಿಯದೆ ಸದಾ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಕುವೆಂಪು ಕನ್ನಡ ಸಂಸ್ಕೃತಿಯನ್ನು ರೂಪಿಸುವ ಅನನ್ಯ ಹೊಣೆಗಾರಿಕೆಯಿಂದ ಸಾಹಿತ್ಯದ ಸರ್ವ ಪ್ರಕಾರಗಳಲ್ಲೂ ಕೈಯಾಡಿಸಿದರು. ಪ್ರಖರ ವೈಚಾರಿಕ ದೃಷ್ಟಿಕೋನದಿಂದ ಸಮಾಜವನ್ನು ವಿಶ್ಲೇಷಿಸುತ್ತಿದ್ದ ವಿಶ್ವಮಾನವ ಕುವೆಂಪು ಆಳವಾದ ಸಾಮಾಜಿಕ ಪ್ರಜ್ಞೆಯಿಂದ ಬರೆದರು, ದಿಟ್ಟವಾಗಿ ಮಾತಾಡಿದರು? ಅಸಾಮಾನ್ಯ ಎತ್ತರಕ್ಕೆ ಏರಿದರು.’
ಈ ಭಾಷಣ ಅಥವಾ ಬರಹ ಯಾರದು, ಇದು ಎಲ್ಲಿದೆ ಎಂದು ಅನಗತ್ಯ ಕುತೂಹಲದಿಂದ ಹುಡುಕದಿರಿ! ಇಂಥ ಭಾಷಣಗಳನ್ನು, ಬರಹಗಳನ್ನು ನೀವು ನಿತ್ಯ ನೋಡುತ್ತಿರುತ್ತೀರಿ. ಇವು ಅನೇಕ ಬುಡುಬುಡಿಕೆ ಭಾಷಣಕಾರರ ನಿತ್ಯದ ಟೆಂಪ್ಲೆಟ್‌ಗಳು ಅಥವಾ ಮಾದರಿ ಚೌಕಟ್ಟುಗಳು! ಈ ಚೌಕಟ್ಟುಗಳಲ್ಲಿ ಕೃತಿಯ ಹೆಸರನ್ನು ಬದಲಿಸಿ, ಕೃತಿ ಬರೆದವರ ಹೆಸರಿನ ಬದಲಿಗೆ ಮತ್ತೊಬ್ಬರ ಹೆಸರು ಹಾಕಿದರೆ ಅದು ಆ ಮತ್ತೊಬ್ಬರನ್ನು ಕುರಿತ ಭಾಷಣವಾಗುತ್ತದೆ! ಕುರಿತೋದದೆಯೂ ಭಾಷಣಪ್ರವೀಣಮತಿಗಳ ಈ ಕೃತಕ ಜಾಣತನ ನಮಗೀಗಾಗಲೇ ಚಿರಪರಿಚಿತ!
ಅಂದರೆ, ಮೇಲೆ ಕೊಟ್ಟಿರುವ ಭಾಷಣ ಅಥವಾ ಬರಹದಲ್ಲಿ ಕುವೆಂಪು ಬದಲಿಗೆ ಬೇಂದ್ರೆಯವರ ಹೆಸರು ಹಾಕಿದರೂ ನಡೆಯುತ್ತದೆ; ತೇಜಸ್ವಿಯವರ ಹೆಸರು ಹಾಕಿದರೂ ಯಾರೂ ಬೆರಳು ಮಾಡಿ ತೋರಿಸುವುದಿಲ್ಲ! ಅದೇ ರೀತಿ, ‘ದ ಸೋರ್ ಮ್ಯಾಂಗೋ ಟ್ರೀ’ ಸಂಕಲನದ ಸಂಪಾದಕನನ್ನು ಕುರಿತು ‘ಕೃಜಾ’ ಕೊಟ್ಟಿರುವ ಉತ್ತರದಲ್ಲಿ ಸಂಪಾದಕ ನಟರಾಜ್ ಹುಳಿಯಾರ್ ಬದಲಿಗೆ, ಸಂಪಾದಕ ತಾರಕೇಶ್ವರ್ ಎಂದರೂ ನಡೆಯುತ್ತದೆ; ‘ಲಂಕೇಶರ ಆಯ್ದ ಕೃತಿಗಳು’ ಎಂಬುದರ ಬದಲಿಗೆ ‘ಶ್ರೀಕೃಷ್ಣ ಆಲನಹಳ್ಳಿಯವರ ಆಯ್ದ ಕೃತಿಗಳು’ ಎಂದರೂ ನಡೆಯುತ್ತದೆ!
ಎಐ ಉತ್ತರಗಳು ಸೃಷ್ಟಿಸುವ ಸವಾಲು ಇಷ್ಟು ಸರಳವಲ್ಲ ಎಂಬುದು ನಿಜ. ಎಐ ಸ್ಪಂದನ ಕೆಲವೆಡೆ ಅದ್ಭುತವಾಗಿದೆ.
ಎಐ ಇಂಗ್ಲಿಷಿನಲ್ಲಿ ಕವಿತೆಗಳಿಗೆ ಆಕರ್ಷಕ ಟೈಟಲ್ ಕೊಡುವ ಅಚ್ಚರಿಯನ್ನು ಕಂಡಿದ್ದೇನೆ. ಎಐ ಅಲ್ಲಿಂದ, ಇಲ್ಲಿಂದ ಕಿತ್ತು ಹಾಕಿ ಕಿಲಾಡಿ ಕತೆಗಳನ್ನು ಬರೆಯುವುದನ್ನೂ ನೋಡಿದ್ದೇನೆ; ಶೇಕ್ಸ್‌ಸ್ಪಿಯರ್, ಎಲಿಯಟ್ ಬಗ್ಗೆ ಸ್ಟೂಡೆಂಟುಗಳಿಗೆ ಅದು ಕ್ಷಣಮಾತ್ರದಲ್ಲಿ ಅಸೈನ್‌ಮೆಂಟ್ ಬರೆದುಕೊಡುವುದನ್ನೂ ಕೇಳಿದ್ದೇನೆ. ಈ ಎಲ್ಲದರಲ್ಲೂ ಒಂದು ಮಟ್ಟದ ಜಾಣತನ, ಸ್ಮಾರ್ಟ್‌ನೆಸ್ ಎದ್ದು ಕಾಣುವುದನ್ನೂ ಗಮನಿಸಿದ್ದೇನೆ.
ಇಷ್ಟಾಗಿಯೂ, ಮೇಲೆ ಹೇಳಿದ ಲಂಕೇಶರ ‘ದ ಸೋರ್ ಮ್ಯಾಂಗೋ ಟ್ರೀ’ ಪುಸ್ತಕದಲ್ಲಿರುವ ‘ಸಹಪಾಠಿ’ ಕತೆಯ ‘ದ ಕ್ಲಾಸ್‌ಮೇಟ್’ ಎಂಬ ಇಂಗ್ಲಿಷ್ ಅನುವಾದವನ್ನು ಎಐ ನಿಜಕ್ಕೂ ಸೂಕ್ಷ್ಮವಾಗಿ ಗ್ರಹಿಸಬಲ್ಲದೆ? ‘ಸಹಪಾಠಿ’ ಕತೆಯನ್ನು ‘ಶತಮಾನದ ಕನ್ನಡ ಕತೆ’ ಎಂದು ಬಣ್ಣಿಸಿದ ಡಿ. ಆರ್. ನಾಗರಾಜರ ವಿಶಿಷ್ಟ ಸಾಂಸ್ಕೃತಿಕ
ವ್ಯಾಖ್ಯಾನ ಎಐಗೆ ದಕ್ಕಬಲ್ಲದೆ? ಅಥವಾ ಸಾಹಿತ್ಯ ಕೃತಿಗಳ ಸೂಕ್ಷ್ಮ ಓದುಗರಾದ ಕನ್ನಡದ ಕಿ.ರಂ. ನಾಗರಾಜ್, ಒ.ಎಲ್. ನಾಗಭೂಷಣಸ್ವಾಮಿ, ಎಚ್.ಎಸ್. ರಾಘವೇಂದ್ರರಾವ್, ಆಶಾದೇವಿ, ರಾಜೇಂದ್ರ ಚೆನ್ನಿ ಥರದವರಂತೆ; ಅಥವಾ ಇಂಗ್ಲಿಷಿನ ವಿಲಿಯಂ ಎಂಪ್ಸನ್ ಅಥವಾ ಹೆರಾಲ್ಡ್ ಬ್ಲೂಮ್ ಥರದವರಂತೆ ಎಐ ಈ ಕತೆಯನ್ನು ನಿಕಟವಾಗಿ ಓದಬಲ್ಲದೆ?
ಈ ಥರದ ಸೂಕ್ಷ್ಮ ಕಣ್ಣು, ವಿಶೇಷ ಗ್ರಹಿಕೆಗಳ ಮೂಲಕ ಕೃತಿಗಳ ಸಂಕೀರ್ಣ ಅರ್ಥಗಳನ್ನು ‘ಎಐ’ ವಿವರಿಸುವ ಸಾಧ್ಯತೆ ಕನ್ನದಲ್ಲಂತೂ ಸದ್ಯದಲ್ಲಿ ಕಾಣುತ್ತಿಲ್ಲ. ‘ಓದುವುದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂದ ಡೆರಿಡಾನ ಸೃಜನಶೀಲ ಸವಾಲಿನ ಕೆಲಸವನ್ನು ಕೃಜಾ ಕೈಗೆತ್ತಿಕೊಳ್ಳಬಲ್ಲದೆ? ಅಕಸ್ಮಾತ್ ಕೈಗೆತ್ತಿಕೊಂಡರೂ, ಅದು ಕೊಡುತ್ತಿರುವುದು ಅರ್ಥವೋ ಅನರ್ಥವೋ ಎಂಬುದನ್ನು ಮಾತ್ರ ನಿಮ್ಮ ಸಹಜ ಬುದ್ಧಿಯೇ ತೀರ್ಮಾನಿಸಬೇಕಾಗುತ್ತದೆ.
ಹೀಗಿದ್ದರೂ ಸಾಹಿತಿಗಳಾಗಲೀ, ಸಾಹಿತ್ಯದ ಅಧ್ಯಾಪಕ, ಅಧ್ಯಾಪಕಿಯರಾಗಲೀ ಎಐ ಸವಾಲನ್ನು ತೀರಾ ಹಗುರಾಗಿ ನೋಡಿ ಆರಾಮಾಗಿರಲಾಗದು! ಅನುಭವ ಶೋಧನೆಯನ್ನು, ಅನುಭವ ಮಂಡನೆಯನ್ನು, ಕೃತಿ ರಚನೆಯನ್ನು; ಕೃತಿಗಳ ಓದು, ವ್ಯಾಖ್ಯಾನಗಳನ್ನು ಇನ್ನಷ್ಟು ಸೂಕ್ಷ್ಮವಾಗಿಸುವುದು, ಆಳವಾಗಿಸುವುದು ಹಾಗೂ ಸೃಜನಶೀಲಗೊಳಿಸುವುದೇ ಎಲ್ಲ ಬಗೆಯ ಕೃತಕ ಜಾಣತನಕ್ಕೆ ಉತ್ತರವಾಗಬಲ್ಲದೇನೋ! ಸ್ಟೂಡೆಂಟುಗಳು ಒಂದರ ಮೇಲೊಂದು ಕೃಜಾ ಅಸೈನ್‌ಮೆಂಟುಗಳನ್ನು ತಂದುಕೊಡಬಹುದು; ಆದರೆ ಅವರಿಗೆ ಕೇವಲ ಐದು ನಿಮಿಷಗಳ ಕಾಲ ಒಂದು ಪುಸ್ತಕದ ಸೂಕ್ಷ್ಮ ಅಂಶಗಳನ್ನು ನೇರವಾಗಿ ಬಾಯಿಮಾತಿನಲ್ಲಿ ಹೇಳುವಂತೆ ಮೇಡಂ, ಮೇಷ್ಟ್ರುಗಳು ಕೇಳಿ ನೋಡಲಿ: ಅವರ ಸಹಜ ಜಾಣತನವೆಷ್ಟು, ಸ್ವಂತ ಬುದ್ಧಿಯೆಷ್ಟು ಎಂಬುದು ಉತ್ತರಿಸಿದವರಿಗೂ, ಕೇಳಿಸಿಕೊಂಡವರಿಗೂ ನಿಧಾನಕ್ಕೆ ಹೊಳೆಯತೊಡಗುತ್ತದೆ.
ಕೆಲ ಬಗೆಯ ವಿಜ್ಞಾನದ ಪ್ರಯೋಗಗಳಲ್ಲಿ, ವೈದ್ಯಕೀಯ ಚಿಕಿತ್ಸೆಗಳಲ್ಲಿ ಎಐ ಕ್ರಾಂತಿಕಾರಕ ಕೆಲಸ ಮಾಡತೊಡಗಿರುವುದು ಕೂಡ ನಿಜ. ಮೊನ್ನೆ ತಾನೇ ವೈರಸ್ ಒಂದರ ನಿಗೂಢ ಶಕ್ತಿಯ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದ ವಿಜ್ಞಾನಿಗಳು
ಬೆಚ್ಚಿ ಬೀಳುವಂತೆ ಮೆಟಾ ಎಐ ಈ ವೈರಸಿನ ಬಾಲವೇ ಅದರ ಅಗಾಧ ಶಕ್ತಿಗೆ ಕಾರಣ ಎಂಬ
ಉತ್ತರ ಹುಡುಕಿ ಕೊಟ್ಟಿದೆ. ವಿಚಿತ್ರವೆಂದರೆ, ಆ ವಿಜ್ಞಾನಿಗಳು ಮೊದಲೇ ಮಾಡಿಕೊಂಡಿದ್ದ ನಾಲ್ಕು ಊಹಾಕಲ್ಪನೆ ಅಥವಾ ಹೈಪಾಥಿಸಿಸ್ಸುಗಳಲ್ಲಿ ಈ ಉತ್ತರವೂ ಇತ್ತು.
ಇದನ್ನೆಲ್ಲ ನೋಡನೋಡುತ್ತಾ, ‘ಇದು ಬರಿ ಎಐ ಅಲ್ಲೋ ಅಣ್ಣ!’ ಎಂಬ ಸಹಜ ಉದ್ಗಾರ ನಿಮ್ಮಲ್ಲಿ ಹುಟ್ಟಿದರೆ ಅಚ್ಚರಿಯಲ್ಲ. ಡಿಗಿಟಲ್ ಯುಗದಲ್ಲಿ ಹೊಸ ಹೊಸ ಸರಕು ಬಂದಂತೆ ಕೃಜಾ ಕೂಡ ಬಂದಿದೆ; ಅದರೊಡನೆ ಏಗುವುದು, ಸೆಣಸುವುದು, ಬಳಸುವುದು, ಮಣಿಸುವುದು ಇವೆಲ್ಲ ಅನಿವಾರ್ಯವೆಂಬಂತೆ ಕಾಣುತ್ತದೆ,