ಹತ್ತು ವರ್ಷಗಳಲ್ಲಿ ದುಬೈಗೆ ಅತ್ಯಾಧುನಿಕ ಅಂತಾರಾಷ್ಟ್ರೀಯ ವಿಮಾನನಿಲ್ದಾಣ

Update: 2024-04-28 16:47 GMT

                                                                           PC : X \ @vanrobbin11

ಅಬುದಾಭಿ: ಜಗತ್ತಿನ ಅತ್ಯಂತ ಸಂಚಾರದಟ್ಟಣೆಯ ದುಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಮುಂದಿನ ಹತ್ತು ವರ್ಷಗಳಲ್ಲಿ ದಕ್ಷಿಣ ಭಾಗದಲ್ಲಿರುವ ಮರುಭೂಮಿ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗುವುದು ಎಂದು ಯುಎಇನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ರವಿವಾರ ಪ್ರಕಟಿಸಿದ್ದಾರೆ.

ಕೊರೋನಾ ವೈರಸ್ ಹಾವಳಿಯ ಬಳಿಕ ಕಳೆಗುಂದಿದ ದುಬೈನ ಅಂತಾರಾಷ್ಟ್ರೀಯ ವಿಮಾನಯಾನ ಉದ್ಯಮಕ್ಕೆ ಪುನಶ್ಚೇತನ ನೀಡುವ ತನ್ನ ಯೋಜನೆಯ ಭಾಗವಾಗಿ ಯುಎಇ ಬೃಹತ್ ವಿಮಾನನಿಲ್ದಾಣವನ್ನು ನಿರ್ಮಿಸಲಿದೆ. ಡಿಎಕ್ಸ್‌ಬಿ ಎಂದೇ ಜನಪ್ರಿಯವಾದ ಹಾಲಿ ದುಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ದುಬೈ ವರ್ಲ್ಡ್ ಸೆಂಟ್ರಲ್ ಪ್ರದೇಶದಲ್ಲಿರುವ ಅಲ್‌ಮಖ್ತೂಮ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಹಲವು ವರ್ಷಗಳ ಹಿಂದೆಯೇ ಹಮ್ಮಿಕೊಳ್ಳಲಾಗಿತ್ತು. ಆದರೆ 2009ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಆ ಯೋಜನೆ ನೆನೆಗುದಿಯಲ್ಲಿತ್ತು.

‘‘ ಮುಂದಿನ ತಲೆಮಾರಿಗಾಗಿ ನಾವು ಹೊಸ ಯೋಜನೆಯೊಂದನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಮಕ್ಕಳಿಗಾಗಿ ಹಾಗೂ ತರುವಾಯ ಅವರ ಮಕ್ಕಳಿಗಾಗಿ ನಿರಂತರ ಹಾಗೂ ಸ್ಥಿರವಾದ ಅಭಿವೃದ್ಧಿಯನ್ನು ಖಾತರಿಪಡಿಸುತ್ತಿದ್ದೇವೆ’’ ಎಂದು ಶೇಖ್ ಮೊಹಮ್ಮದ್ ಅವರು ಆನ್‌ಲೈನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಭವಿಷ್ಯದಲ್ಲಿ ದುಬೈ ನೂತನ ಜಾಗತಿಕ ಕೇಂಂದ್ರವಾಗಿ ಮೂಡಿಬರಲಿದೆ.

ನೂತನ ವಿಮಾನನಿಲ್ದಾಣವು ವಿಮಾನಗಳ ಸಂಚಾರವನ್ನು ನಿಯಂತ್ರಿಸುವ ಅತ್ಯಾಧುನಿಕ ಕಂಪ್ಯೂಟರ್ ವ್ಯವಸ್ಥೆಯನ್ನು ಹೊಂದಿವೆ. ಅರೇಬಿಯದ ಪಾರಂಪರಿಕ ಬೆಡೊಯಿನ್ ಜನರ ಶಿಬಿರಗಳನ್ನು ನೆನಪಿಸುವ ಬಿಳಿ ಬಣ್ಣದ ಟರ್ಮಿನಲ್, ಐದು ಪರ್ಯಾಯ ರನ್‌ವೇಗಳು ಹಾಗೂ 400 ಏರ್‌ಕ್ರಾಫ್ಟ್ ಗೇಟ್‌ಗಳನ್ನು ಹೊಂದಿರುವುದಾಗಿ ಪ್ರಕಟಣೆ ತಿಳಿಸಿದೆ.

ಹಾಲಿ ದುಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಡಿಎಕ್ಸ್‌ಬಿ)ದ ಮೂಲಕ 2019ರಲ್ಲಿ 8.63 ಕೋಟಿ ಮಂದಿ ಪ್ರಯಾಣಿಸಿದ್ದು, ಕೋವಿಡ್ ಹಾವಳಿಗೆ ಮುನ್ನ ಅತ್ಯಂತ ಜನಸಂಚಾರ ನಿಬಿಡ ವಿಮಾನ ನಿಲ್ದಾಣವೆನಿಸಿತ್ತು. ಕೊರೋನಾ ಸಾಂಕ್ರಾಮಿಕದ ಹಾವಳಿಯ ಈ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯುಂಟಾಗಿದೆ. 2022ರಲ್ಲಿ 6.60 ಕೋಟಿ ಪ್ರಯಾಣಿಕರು ಈ ವಿಮಾನ ನಿಲ್ದಾಣದ ಮೂಲಕ ಹಾದುಹೋಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News