34 ಕೋಟಿ ರೂ. ಪರಿಹಾರ ಹಣ ನೀಡಿದರೂ ಬಂಧನ ಮುಕ್ತರಾಗದ ಕೇರಳದ ರಹೀಂ!

Update: 2024-11-17 16:29 GMT

ಅಬ್ದುಲ್‌ ರಹೀಮ್

ರಿಯಾದ್: ಸೌದಿಯಲ್ಲಿ ಮಗುವೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಕಳೆದ 18 ವರ್ಷಗಳಿಂದ ರಿಯಾದ್ ಜೈಲಿನಲ್ಲಿರುವ ಅಬ್ದುಲ್ ರಹೀಮ್ ಗೆ ಮರಣದಂಡನೆ ರದ್ದು ತೀರ್ಪಿನ ಹೊರತಾಗಿಯೂ ಇನ್ನು ಕೂಡ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.

ಈ ಪ್ರಕರಣದ ಮರುಪರಿಶೀಲನೆ ಮುಂದೂಡಲಾಗಿದ್ದು, ಈ ಬಗ್ಗೆ ಎರಡು ವಾರಗಳಲ್ಲಿ ಮತ್ತೊಮ್ಮೆ ಪರಿಶೀಲಿಸಲಿದೆ ಎಂದು ವರದಿಯಾಗಿದೆ. ಮೃತ ಸೌದಿ ಮಗುವಿನ ಕುಟುಂಬವು ಹಣಕಾಸಿನ ನೆರವು (ದಿಯಾ) ಸ್ವೀಕರಿಸಲು ಸಮ್ಮತಿಸಿ ಕ್ಷಮೆ ನೀಡಲು ಒಪ್ಪಿಕೊಂಡ ನಂತರ ರಿಯಾದ್ ಕ್ರಿಮಿನಲ್ ಕೋರ್ಟ್ ಮರಣದಂಡನೆ ಶಿಕ್ಷೆ ರದ್ದುಗೊಳಿಸಿತ್ತು. ಆದರೆ ಕಾನೂನು ಪ್ರಕ್ರಿಯೆಯು ರಹೀಮ್ ಅವರ ಬಿಡುಗಡೆಯನ್ನು ವಿಳಂಬಗೊಳಿಸಿದೆ.

ಇತ್ತೀಚೆಗೆ ಅಬ್ದುಲ್ ರಹೀಮ್ ಅವರ ತಾಯಿ, ಸಹೋದರ ಮತ್ತು ಚಿಕ್ಕಪ್ಪ ರಿಯಾದ್ ಜೈಲಿನಲ್ಲಿ ಅವರನ್ನು ಭೇಟಿ ಮಾಡಿದ್ದರು. ಅಬ್ದುಲ್ ರಹೀಮ್ ಕಳೆದ 18 ವರ್ಷಗಳಿಂದ ಸೌದಿ ಜೈಲಿನಲ್ಲಿದ್ದಾರೆ. 2006 ನವೆಂಬರ್ ನಲ್ಲಿ ತನ್ನ 26ನೇ ವಯಸ್ಸಿನಲ್ಲಿ ಅಬ್ದುಲ್ ರಹೀಮ್ ಹೌಸ್ ಡ್ರೈವರ್ ವೀಸಾದಲ್ಲಿ ರಿಯಾದ್‌ ಗೆ ಹೋಗಿದ್ದರು. ತನ್ನ ವೀಸಾ ಪ್ರಾಯೋಜಕ ಫೈಜ್ ಅಬ್ದುಲ್ಲಾ ಅಬ್ದುಲ್ ರಹ್ಮಾನ್ ಅಲ್ ಶಹರಿ ಅವರ ಮಗ ಅನಸ್ ಅವರನ್ನು ನೋಡಿಕೊಳ್ಳುವುದು ಅವರ ಕೆಲಸವಾಗಿತ್ತು. ಅಂಗವೈಕಲ್ಯತೆಯಿಂದ ಕತ್ತಿನ ಕೆಳಗೆ ನಿಶ್ಚಲನಾಗಿದ್ದ ಅನಸ್ ಗೆ ಕುತ್ತಿಗೆಗೆ ಅಳವಡಿಸಲಾಗಿದ್ದ ಉಪಕರಣದ ಮೂಲಕ ಆಹಾರ ನೀಡಲಾಗುತ್ತಿತ್ತು. 2006 ಡಿಸೆಂಬರ್ 24ರಂದು ಶಾಪಿಂಗ್‌ ಗೆಂದು  ಹೊರಗೆ ಹೋಗುತ್ತಿದ್ದಾಗ ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದ ಕಾರನ್ನು ಸಿಗ್ನಲ್ ಕಟ್ ಮಾಡಿ ಚಲಿಸುವಂತೆ ಒತ್ತಾಯ ಮಾಡಿದ್ದ ಅನಸ್, ಚಾಲಕ ರಹೀಮ್ ಜೊತೆ ಜಗಳವಾಡಿದ್ದನು. ಇದನ್ನು ತಡೆಯಲು ಮುಂದಾದಾಗ ಆಕಸ್ಮಿಕವಾಗಿ ಕೈ ಕುತ್ತಿಗೆಯಲ್ಲಿದ್ದ ಉಪಕರಣಕ್ಕೆ ತಾಗಿ ಅನಸ್ ಪ್ರಜ್ಞೆ ತಪ್ಪಿ ಬಿದ್ದು, ಬಳಿಕ ಮರಣ ಹೊಂದಿದ್ದಾನೆ.

ಘಟನೆಯ ನಂತರ, ಸೌದಿ ಪೊಲೀಸರು ರಹೀಮ್ ನನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದರು. ರಿಯಾದ್ ನ್ಯಾಯಾಲಯ ಆತನಿಗೆ ಮರಣದಂಡನೆ ವಿಧಿಸಿದೆ. ಇದರ ನಂತರ, ಯುವಕನ ಬಿಡುಗಡೆಗಾಗಿ ಉನ್ನತ ಮಟ್ಟದಲ್ಲಿ ಹಲವಾರು ಮಧ್ಯಸ್ಥಿಕೆಗಳು ನಡೆದವು, ಆದರೆ ಬಾಲಕನ ಕುಟುಂಬವು ಕ್ಷಮಾದಾನ ನೀಡಲು ಸಿದ್ಧವಾಗಿರಲಿಲ್ಲ. ಸತತ ಪ್ರಯತ್ನದ ನಂತರ ಫೈಜ್ ಕುಟುಂಬವು 34 ಕೋಟಿ ರೂ ನೀಡಿದರೆ ಕ್ಷಮಾದಾನ ನೀಡುವುದಾಗಿ ಬಾಲಕನ ಕುಟುಂಬ ಒಪ್ಪಿಗೆ ನೀಡಿತ್ತು. ಸಾಮಾಜಿಕ ಕಾರ್ಯಕರ್ತರು ಸಮಿತಿ ರಚಿಸಿ ರಹೀಮ್ ಗಾಗಿ ಕ್ರೌಡ್ ಫಂಡಿಂಗ್ ಆರಂಭಿಸಿದ್ದರು. ಪ್ರಮುಖ ಉದ್ಯಮಿ ಬೋಬಿ ಚೆಮ್ಮನ್ನೂರ್ ಒಂದು ಕೋಟಿ ರೂ ನೀಡಿ ಧನ ಸಂಗ್ರಹ ಅಭಿಯಾನ ಘೋಷಿಸಿ ನಿಧಿಸಂಗ್ರಹ ಮಾಡಿದ್ದರು. ಕೊನೆಗೆ 34 ಕೋಟಿ ರೂ. ಸಂಗ್ರಹಿಸಿ ನೀಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News