ಅರೇಬಿಕ್ ಭಾಷೆ, ಸಂಸ್ಕೃತಿ ಸ್ಪರ್ಧೆ: ಹೊನ್ನಾವರದ ಅಬ್ದುಲ್ ಖಾದಿರ್ ಮುಹಮ್ಮದ್ ಮೀರಾ ಶೇಖ್ ಗೆ ಪ್ರಥಮ ಬಹುಮಾನ
ರಿಯಾದ್ (ಸೌದಿ ಅರೇಬಿಯಾ): ಕಿಂಗ್ ಸಲ್ಮಾನ್ ಗ್ಲೋಬಲ್ ಅಕಾಡೆಮಿ ಫಾರ್ ಅರೇಬಿಕ್ ಲ್ಯಾಂಗ್ವೇಜ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ಅರೇಬಿಕ್ ಭಾಷೆ ಮತ್ತು ಸಂಸ್ಕೃತಿ ಸ್ಪರ್ಧೆಯಲ್ಲಿ ಮದೀನಾದ ಇಸ್ಲಾಮಿಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅಬ್ದುಲ್ ಖಾದಿರ್ ಮುಹಮ್ಮದ್ ಮೀರಾ ಶೇಖ್ ಪ್ರಥಮ ಬಹುಮಾನ ಪಡೆದಿದ್ದಾರೆ. ಇವರು ಮೂಲತಃ ಕರ್ನಾಟಕದ ಹೊನ್ನಾವರ ತಾಲ್ಲೂಕಿನ ಮಂಕಿ ಗ್ರಾಮದ ನಿವಾಸಿಯಾಗಿದ್ದಾರೆ.
ಈ ಸ್ಪರ್ಧೆಯಲ್ಲಿ ವಿವಿಧ ದೇಶಗಳ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ತಮ್ಮ ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸಿದ್ದರು. ಅರೇಬಿಕ್ ಭಾಷೆ ಹಾಗೂ ಸಂಸ್ಕೃತಿಯ ತಿಳುವಳಿಕೆ ಕುರಿತು ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಈ ಪೈಕಿ ಅಬ್ದುಲ್ ಖಾದಿರ್ ಪ್ರಥಮ ಬಹುಮಾನಕ್ಕೆ ಭಾಜನರಾದರು. ಅವರಿಗೆ ಚಿನ್ನದ ಪದಕ ಹಾಗೂ ಗಮನಾರ್ಹ ಮೊತ್ತದ ನಗದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಅರೇಬಿಕ್ ಭಾಷೆ ಕಲಿಕೆ ಹಾಗೂ ಸಂಸ್ಕೃತಿಯ ಜ್ಞಾನದಲ್ಲಿ ಅರ್ಪಣಾ ಮನೋಭಾವ ಹಾಗೂ ಉತ್ಕೃಷ್ಟತೆಯಲ್ಲಿ ಅದ್ವಿತೀಯ ಸಾಧನೆ ತೋರಿದ ಅಬ್ದುಲ್ ಖಾದಿರ್ ರನ್ನು ಅಕಾಡೆಮಿ ಸನ್ಮಾನಿಸಿತು.
ಅಬ್ದುಲ್ ಖಾದಿರ್ ಮುಹಮ್ಮದ್ ಮೀರಾ ಶೇಖ್ ತಮ್ಮ ಈ ಸಾಧನೆಯ ಮೂಲಕ ತಾವು ವ್ಯಾಸಂಗ ಮಾಡುತ್ತಿರುವ ವಿಶ್ವವಿದ್ಯಾಲಯ, ತವರು ಹಾಗೂ ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.