ದುಬೈ: ಭಾರತೀಯರಿಗಾಗಿ ಐದು ವರ್ಷಗಳ ಮಲ್ಟಿ-ಎಂಟ್ರಿ ಪ್ರವಾಸಿ ವೀಸಾ

Update: 2024-02-27 12:01 GMT

ಹೊಸದಿಲ್ಲಿ: ಉಭಯ ದೇಶಗಳ ನಡುವೆ ಪ್ರಯಾಣವನ್ನು ಉತ್ತೇಜಿಸಲು ಭಾರತೀಯರಿಗಾಗಿ ದುಬೈ ಐದು ವರ್ಷಗಳ ಬಹು-ಪ್ರವೇಶ (ಮಲ್ಟಿ-ಎಂಟ್ರಿ) ಪ್ರವಾಸಿ ವೀಸಾವನ್ನು ಪರಿಚಯಿಸಿದೆ ಎಂದು ದುಬೈ ಆರ್ಥಿಕ ಮತ್ತು ಪ್ರವಾಸೋದ್ಯಮ ಇಲಾಖೆ (ಡಿಇಟಿ)ಯನ್ನು ಉಲ್ಲೇಖಿಸಿ PTI ವರದಿ ಮಾಡಿದೆ.

2023ರಲ್ಲಿ 24.6 ಲಕ್ಷ ಭಾರತೀಯರು ದುಬೈಗೆ ಭೇಟಿ ನೀಡಿದ್ದು,ಕೋವಿಡ್ ಪೂರ್ವದ ಸಮಯಕ್ಕೆ ಹೋಲಿಸಿದರೆ ಇದು ಶೇ.25ರಷ್ಟು ಅಧಿಕವಾಗಿತ್ತು. ಫೆ.22ರ ಡಿಇಟಿಯ ಇತ್ತೀಚಿನ ದತ್ತಾಂಶಗಳ ಪ್ರಕಾರ ವರ್ಷದಿಂದ ವರ್ಷಕ್ಕೆ ಶೇ.34ರಷ್ಟು ಅಸಾಧಾರಣ ಬೆಳವಣಿಗೆಯೊಂದಿಗೆ ದುಬೈ ಪ್ರವಾಸೋದ್ಯಮದ ಪಾಲಿಗೆ ಭಾರತವು ನಂ.1 ಮಾರುಕಟ್ಟೆಯಾಗಿದೆ. 2022ರಲ್ಲಿ 18.4 ಲಕ್ಷ ಭಾರತೀಯರು ದುಬೈಗೆ ಭೇಟಿ ನೀಡಿದ್ದರೆ,ಈ ಸಂಖ್ಯೆ 2019ರಲ್ಲಿ 19.7 ಲಕ್ಷ ಆಗಿತ್ತು ಎಂದು ಅದು ತಿಳಿಸಿದೆ.

ಅರ್ಹ ಭಾರತೀಯ ಪ್ರಜೆಗಳು ಈಗ ಐದು ವರ್ಷಗಳ ಅವಧಿಗೆ ದುಬೈಗೆ ಮಲ್ಟಿ-ಎಂಟ್ರಿ ಸೌಲಭ್ಯವನ್ನು ಪಡೆಯಬಹುದು ಮತ್ತು ಪ್ರತಿ ಬಾರಿ ಭೇಟಿ ನೀಡಿದಾಗಲೂ 90 ದಿನಗಳ ವಾಸ್ತವ್ಯಕ್ಕೆ ಅವಕಾಶವಿರಲಿದೆ. ವರ್ಷವೊಂದರಲ್ಲಿ ಒಟ್ಟು ವಾಸ್ತವ್ಯ 180 ದಿನಗಳನ್ನು ಮೀರದಿದ್ದರೆ ಮತ್ತೆ ಐದು ವರ್ಷಗಳ ಅವಧಿಗೆ ವೀಸಾವನ್ನು ವಿಸ್ತರಿಸಲಾಗುತ್ತದೆ. ವೀಸಾಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಿದ 2ರಿಂದ 5 ದಿನಗಳಲ್ಲಿ ಅವುಗಳನ್ನು ಸಂಸ್ಕರಿಸಲಾಗುತ್ತದೆ.

ವೀಸಾಕ್ಕೆ ಅರ್ಹರಾಗಲು ಅರ್ಜಿದಾರರು ಕೆಲವು ನಿರ್ದಿಷ್ಟ ಅಗತ್ಯಗಳನ್ನು ಪೂರೈಸಬೇಕಾಗುತ್ತದೆ. ಕಳೆದ ಆರು ತಿಂಗಳುಗಳಲ್ಲಿ 4,000 ಡಾಲರ್ ಅಥವಾ ಅದಕ್ಕೆ ಸಮನಾದ ವಿದೇಶಿ ಕರೆನ್ಸಿಗಳ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಯುಎಇಯಲ್ಲಿ ಮಾನ್ಯತೆ ಹೊಂದಿರುವ ಆರೋಗ್ಯ ವಿಮೆ ರಕ್ಷಣೆ ಇವುಗಳಲ್ಲಿ ಸೇರಿವೆ.

ಈ ಉಪಕ್ರಮವು ದುಬೈಗೆ ಭೇಟಿ ನೀಡಲು ಅವಕಾಶ ಒದಗಿಸುವ ಜೊತೆಗೆ ಹೆಚ್ಚಿನ ಆರ್ಥಿಕ ಸಹಯೋಗಕ್ಕೆ ವೇದಿಕೆಯನ್ನೂ ಒದಗಿಸಲಿದೆ ಎಂದು ಡಿಇಟಿಯಲ್ಲಿ ಪ್ರಾಕ್ಸಿಮಿಟಿ ಮಾರ್ಕೆಟ್ಸ್‌ನ ಪ್ರಾದೇಶಿಕ ಮುಖ್ಯಸ್ಥರಾಗಿರುವ ಬದೇರ್ ಅಲಿ ಹಬೀಬ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News