ಗಲ್ಫ್ ವೈದ್ಯಕೀಯ ವಿವಿಯಲ್ಲಿ 26ನೇ ವೈಟ್ ಕೋಟ್ ಸಮಾರಂಭ
ಯುಎಇ: ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ 26ನೇ ʼವೈಟ್ ಕೋಟ್ ಸಮಾರಂಭʼ ಯುಎಇಯ ಅಜ್ಮಾನ್ ಅಲ್ ಜುರ್ಪ್ ಕ್ಯಾಂಪಸ್ ನಲ್ಲಿ ನಡೆದಿದೆ.
ಈ ವೇಳೆ ಹೊಸದಾಗಿ ಸೇರಿಕೊಂಡ 700 ವೈದ್ಯಕೀಯ ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದ್ದಾರೆ. ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ ಸೇರಿಕೊಂಡ 700 ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 102 ವಿವಿಧ ರಾಷ್ಟ್ರಗಳ 5,000 ವಿದ್ಯಾರ್ಥಿಗಳು ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಶೈಕ್ಷಣಿಕ ಅಧ್ಯಯನಗಳ ಜೊತೆಗೆ, ಕೃತಕ ಬುದ್ಧಿಮತ್ತೆಯ ಕುರಿತ ಅನ್ವೇಷಣೆಗೂ ಅವಕಾಶವನ್ನು ಒದಗಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದಿನ್, ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯ ನಿಮ್ಮ ವೃತ್ತಿಜೀವನದಲ್ಲಿ ನಿಮ್ಮ ಜೊತೆಯಾಗಿರುತ್ತದೆ ಮತ್ತು ನಿಮ್ಮನ್ನು ಸದಾ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹೊಸಮ್ ಹಮ್ದಿ ಮಾತನಾಡಿ, ವ್ಯಕ್ತಿಗಳ ನಡುವಿನ ಸಂವಹನ ಬಹಳ ಮುಖ್ಯವಾಗಿದ್ದು, ಉತ್ತಮ ಕೌಶಲ್ಯಗಳು ನಿಮ್ಮನ್ನು ಇನ್ನಷ್ಟು ಸದೃಢರನ್ನಾಗಿ ಮಾಡುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರು ಎಲ್ಲರೂ ಮಾನವೀಯತೆಯನ್ನು ಹಂಚುವ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.
ಪರಿಣಾಮಕಾರಿ ಸಂವಹನ ಸಾಮರ್ಥ್ಯ, ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳುವುದು, ಸಹಾನುಭೂತಿ ಇವೆಲ್ಲವೂ ಆರೋಗ್ಯ ಕ್ಷೇತ್ರದಲ್ಲಿ ಮುಖ್ಯವಾಗಿದೆ. ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯವು ಯುರೋಪ್, ಯುನೈಟೆಡ್ ಸ್ಟೇಟ್ಸ್, ಜಪಾನ್ ಸೇರಿ ಒಟ್ಟು 86 ಪ್ರಮುಖ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಒಪ್ಪಂದಗಳನ್ನು ಹೊಂದಿದೆ. ಇದು ವಿದ್ಯಾರ್ಥಿಗಳಿಗೆ ಸಾಗರೋತ್ತರ ತರಬೇತಿಗಾಗಿ ಅವಕಾಶಗಳನ್ನು ನೀಡುತ್ತದೆ. ಪದವಿ ಕಾರ್ಯಕ್ರಮಗಳನ್ನು ಪ್ರಸ್ತುತ ಅರಿಜೋನಾ ವಿಶ್ವವಿದ್ಯಾಲಯ, ವರ್ಜೀನಿಯಾ ಕಾಮನ್ವೆಲ್ತ್ ವಿಶ್ವವಿದ್ಯಾಲಯ, ವಿಸ್ಕಾನ್ಸಿನ್ ವೈದ್ಯಕೀಯ ಕಾಲೇಜು ಮತ್ತು ಜಪಾನ್ ಟೋಕಿಯೊ ವೈದ್ಯಕೀಯ ಮತ್ತು ದಂತ ವಿವಿ ಸಹಯೋಗದೊಂದಿಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
6 ಕಾಲೇಜುಗಳಲ್ಲಿ 39 ಮಾನ್ಯತೆ ಪಡೆದ ಕೋರ್ಸ್ ಗಳ ಶಿಕ್ಷಣವನ್ನು ನೀಡಲಾಗುತ್ತದೆ. ವಿಶ್ವವಿದ್ಯಾನಿಲಯವು ಅಂತರಾಷ್ಟ್ರೀಯ ಮನ್ನಣೆಯನ್ನು ಗಳಿಸಿದೆ. ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯವು ಇತ್ತೀಚೆಗೆ ಯುಎಇಯ ಆರೋಗ್ಯ ಸಚಿವಾಲಯದಿಂದ (MoHP) ಸಂಶೋಧನೆಯಲ್ಲಿ ಶ್ರೇಷ್ಠ ಸಾಧನೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದಲ್ಲದೆ ಆರೋಗ್ಯ ಕ್ಷೇತ್ರದಲ್ಲಿನ ಸಂಶೋಧನಾ ಕೊಡುಗೆಗಾಗಿ ಅಗ್ರ 10 ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ಮೆಡಿಸಿನ್ ವಿಭಾಗದ ಡೀನ್ ಡಾ. ವಿ ಮಂಡಾ ಹೇಳಿದ್ದಾರೆ.
ಕಳೆದ 25 ವರ್ಷಗಳಲ್ಲಿ, ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ತಲುಪಿದ್ದಾರೆ. ಮಧ್ಯಪ್ರಾಚ್ಯ, ಆಫ್ರಿಕಾ, ದಕ್ಷಿಣ ಏಷ್ಯಾ, ಯುರೋಪ್, ಉತ್ತರ ಅಮೆರಿಕ ಮತ್ತು ಆಸ್ಟ್ರೇಲಿಯಾದಂತಹ ರಾಷ್ಟ್ರಗಳಲ್ಲಿ ಸಿಇಒಗಳು, ವೈದ್ಯಕೀಯ ನಿರ್ದೇಶಕರು ಮತ್ತು ಸಂಶೋಧನಾ ವಿಭಾಗಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಡಾ. ವಿ ಮಂಡಾ ಹೇಳಿದ್ದಾರೆ.