ದುಬೈಯಲ್ಲಿ ಎಸ್ ಎಂ ಸಯ್ಯದ್ ಖಲೀಲ್ ಅವರ ಅಂತಿಮ ಸಂಸ್ಕಾರ
ದುಬೈ: ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಹಾಗೂ ಮಾಧ್ಯಮ ಕಮ್ಯುನಿಕೇಶನ್ಸ್ ಲಿಮಿಟೆಡ್ ನ ಅಧ್ಯಕ್ಷ ಎಸ್ ಎಂ ಸಯ್ಯದ್ ಖಲೀಲ್ (86) ಬುಧವಾರ ತಡರಾತ್ರಿ ದುಬೈ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರವು ಗುರುವಾರ ಸಂಜೆ 5 ಗಂಟೆಗೆ (ಸೋನಾಪುರ್) ಸಮೀಪದ ಮಸೀದಿಯಲ್ಲಿ ಜನಾಝ ನಮಾಝ್ ಪ್ರಾರ್ಥನೆಯೊಂದಿಗೆ ದುಬೈಯ ಅಲ್ ಖಿಸೀಸ್ ಖಬರ್‌ಸ್ಥಾನದಲ್ಲಿ ನೆರವೇರಿತು.
ಈ ಮಾಹಿತಿಯನ್ನು ಭಟ್ಕಳ ಜಮಾಅತ್ ದುಬೈನ ಪ್ರಧಾನ ಕಾರ್ಯದರ್ಶಿ ಜೆಲಾನಿ ಮುಹ್ತಶಮ್ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಭಟ್ಕಳದ ಪ್ರಪ್ರಥಮ ಚಾರ್ಟರ್ಡ್ ಅಕೌಂಟೆಂಟ್ ಗಳಲ್ಲಿ ಒಬ್ಬರಾದ ಸಯ್ಯದ್ ಖಲೀಲ್ ಅವರು ' ಸಿ ಎ ಖಲೀಲ್ ' ಎಂದೇ ಚಿರಪರಿಚಿತರಾಗಿದ್ದ ಖ್ಯಾತ ಅನಿವಾಸಿ ಕನ್ನಡಿಗರಲ್ಲೊಬ್ಬರು. ದುಬೈ ಸಹಿತ ಗಲ್ಫ್ ದೇಶಗಳಲ್ಲಿ ಕನ್ನಡ ಹಾಗೂ ಕೊಂಕಣಿ ಭಾಷೆ ಹಾಗೂ ಸಂಸ್ಕೃತಿಯ ಕಂಪು ಹರಡುವಲ್ಲಿ ಮಹತ್ವದ ಕೊಡುಗೆ ನೀಡಿದವರು. ನೂರಾರು ಯುವಜನರಿಗೆ ಉದ್ಯೋಗ ಪಡೆಯಲು ನೆರವಾದವರು. ಭಟ್ಕಳ , ಮಂಗಳೂರು ಸಹಿತ ಹತ್ತಾರು ಕಡೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಂಘ ಸಂಸ್ಥೆಗಳಿಗೆ ಪೋಷಕರಾಗಿ, ಪದಾಧಿಕಾರಿಯಾಗಿ ಆಸರೆಯಾದವರು.
ಮೃತರ ಪುತ್ರಿಯರಿಬ್ಬರು, ಒಬ್ಬರು ಅಮೆರಿಕದಿಂದ ಹಾಗೂ ಇನ್ನೊಬ್ಬರು ಲಂಡನ್‌ನಿಂದ ದುಬೈಗೆ ಆಗಮಿಸಿದ್ದಾರೆ. ಅವರ ಪುತ್ರ ಎಸ್.ಎಂ. ಸೈಯದ್ ರಯೀಸ್ ಹಾಗೂ ಇನ್ನೊಬ್ಬ ಪುತ್ರಿ ಈಗಾಗಲೇ ದುಬೈಯಲ್ಲಿದ್ದಾರೆ.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಭಾರತ, ಸೌದಿ ಅರೇಬಿಯಾ ಮತ್ತು ಇತರ ದೇಶಗಳಿಂದ ಕುಟುಂಬದ ಸದಸ್ಯರು ಹಾಗೂ ಆಪ್ತರು ದುಬೈಗೆ ಆಗಮಿಸಿದ್ದು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು. ದುಬೈಯ ಎಸ್ಟ್ರಾ ಆಸ್ಪತ್ರೆಯಲ್ಲಿ ಮೃತರ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆಯನ್ನು ಮಾಡಲಾಗಿತ್ತು.
ಭಟ್ಕಳದ ಬಹುತೇಕ ಜನರು ದುಬೈಯ ಅಲ್ ರಾಸ್ ಪ್ರದೇಶದಲ್ಲಿ ವಾಸವಾಗಿರುವುದರಿಂದ, ಜನರು ಸುಲಭವಾಗಿ ಖಲೀಲ್ ಸಾಹೇಬರ ಜನಾಝ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಭಟ್ಕಳ ಮುಸ್ಲಿಮ್ ಜಮಾಅತ್‌ನಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು.
ಡಾ. ಸೈಯದ್ ಖಲೀಲ್ ರಹ್ಮಾನ್ ಅವರ ಅಗಲಿಕೆಯಿಂದ ಕುಟುಂಬಸ್ಥರು ಮತ್ತು ಬಂಧುಗಳು ಆಘಾತದಲ್ಲಿದ್ದು, ದುಬೈ ಹಾಗೂ ಇತರ ದೇಶಗಳಲ್ಲಿ ಅವರ ಆಪ್ತರು ಸಂತಾಪ ಸೂಚನೆ ವ್ಯಕ್ತಪಡಿಸುತ್ತಿದ್ದಾರೆ.