ಛಾಯಾದೇವಿ ಕೃಷ್ಣಮೂರ್ತಿಗೆ 'ಮಯೂರ ವಿಶ್ವಮಾನ್ಯ ಕನ್ನಡತಿ ಅಂತಾರಾಷ್ಟ್ರೀಯ ಪ್ರಶಸ್ತಿ': ನ.16ರಂದು ಪ್ರದಾನ

Update: 2024-11-13 06:45 GMT

ಯುಎಇ: ಕರ್ನಾಟಕ ಸಂಘ, ಶಾರ್ಜಾದ ವತಿಯಿಂದ ನೀಡುವ ಪ್ರಸಕ್ತ ಸಾಲಿನ 'ಮಯೂರ ವಿಶ್ವಮಾನ್ಯ ಕನ್ನಡತಿ ಅಂತಾರಾಷ್ಟ್ರೀಯ ಪ್ರಶಸ್ತಿ'ಗೆ ಅಜ್ಮಾನ್ ಇಂಡಿಯನ್ ಅಸೋಸಿಯೇಶನ್, ಯುಎಇ ಇನ್ಚಾರ್ಜ್ - ಡಿಸ್ಟ್ರೆಸ್ ಸಮಿತಿಯ ಛಾಯಾದೇವಿ ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ.

ನ.16ರಂದು ಸಂಜೆ 6ಕ್ಕೆ ಶಾರ್ಜಾದ ಇವಾನ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿರುವ ಕರ್ನಾಟಕ ಸಂಘದ 22ನೇ ವಾರ್ಷಿಕೋತ್ಸವ, 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಛಾಯಾದೇವಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಮೂಲತಃ ಬೆಂಗಳೂರಿನವರಾದ ಛಾಯಾದೇವಿ ಕೃಷ್ಣಮೂರ್ತಿ ವಿಜ್ಞಾನ ಮತ್ತು ಕಾನೂನಿನಲ್ಲಿ ಪದವಿ ಪಡೆದಿದ್ದಾರೆ. ಯುಕೆ, ಜರ್ಮನಿ, ಸಿಂಗಾಪುರ ಮತ್ತು ಮಲೇಶ್ಯದಲ್ಲಿ ಉದ್ಯೋಗಿಯಾಗಿದ್ದ ಅವರು ಕಳೆದ 15 ವರ್ಷಗಳಿಂದ ಯುಎಇನಲ್ಲಿ ನೆಲೆಸಿದ್ದು, ಅಜ್ಮಾನ್ ನಲ್ಲಿ ಸಣ್ಣ ವ್ಯಾಪಾರವೊಂದನ್ನು ಹೊಂದಿದ್ದಾರೆ.

ಕಳೆದ 9 ವರ್ಷಗಳಿಂದ ಅಜ್ಮಾನ್ ಇಂಡಿಯನ್ ಅಸೋಸಿಯೇಶನ್ ನ ಸಂಕಷ್ಟ ಸಮಿತಿಯ ಉಸ್ತುವಾರಿಯಾಗಿರುವ ಛಾಯಾದೇವಿ, ಯುಎಇಯಲ್ಲಿ ವಿವಿಧ ಕಾರಣಕ್ಕೆ ಮೃತಪಟ್ಟ 950ಕ್ಕೂ ಅಧಿಕ ಭಾರತೀಯರ ಮೃತದೇಹಗಳನ್ನು ಸ್ವದೇಶಕ್ಕೆ ಕಳುಹಿಸಲು ನೆರವಾಗಿದ್ದಾರೆ. ಅದೇರೀತಿ ಸಂಕಷ್ಟಕ್ಕೆ ಸಿಲುಕಿದ್ದ 100ಕ್ಕೂ ಅಧಿಕ ಮಹಿಳೆಯರನ್ನು ಸ್ವದೇಶಕ್ಕೆ ಕರೆತರುವಲ್ಲಿ ಸಹಾಯ ಮಾಡಿದ್ದಾರೆ, 1400ಕ್ಕೂ ಹೆಚ್ಚು ಕಾರ್ಮಿಕ ಪ್ರಕರಣಗಳನ್ನು ಪರಿಹರಿಸುವಲ್ಲಿ ಬೆಂಬಲ ನೀಡಿದ್ದಾರೆ. 25ಕ್ಕೂ ಹೆಚ್ಚು ವೈದ್ಯಕೀಯ ವಾಪಸಾತಿಗೆ ಸಹಾಯಹಸ್ತ ಚಾಚಿದ್ದಾರೆ. ಯುಎಇ ಸರ್ಕಾರವು ಇವರಿಗೆ ಸಮಾಜ ಸೇವಕರಾಗಿ 10 ವರ್ಷಗಳ ಗೋಲ್ಡನ್ ವೀಸಾವನ್ನು ನೀಡಿದೆ.

ಕೋವಿಡ್ ಸಾಂಕ್ರಾಮಿಕ ಹಾವಳಿ ಸಂದರ್ಭದಲ್ಲಿ ಆಹಾರ ಕಿಟ್ ಗಳ ವಿತರಣೆ, ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದು, ಕೋವಿಡ್ ಪೀಡಿತ ಜನರಿಗೆ ಔಷಧಿಗಳು ಮತ್ತು ಆಹಾರವನ್ನು ತಲುಪಿಸುವಲ್ಲಿ ಛಾಯಾದೇವಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

OVID-19 ಸಾಂಕ್ರಾಮಿಕ ಸಮಯದಲ್ಲಿ 1.4 ಮಿಲಿಯನ್ ಡೋಸ್ ಕೋವಿಡ್ ಲಸಿಕೆಯನ್ನು ಒದಗಿಸಲು ಅಜ್ಮಾನ್ ನ ಇಂಡಿಯನ್ ಅಸೋಸಿಯೇಶನ್ ಆವರಣದಲ್ಲಿ ಯುಎಇ ಆರೋಗ್ಯ ಸಚಿವಾಲಯದ ಜೊತೆಗೆ ಮುಂಚೂಣಿಯಯಲ್ಲಿ ನಿಂತು ಕಾರ್ಯ ನಿರ್ವಹಿಸಿದ್ದ ಛಾಯಾದೇವಿ, ಯುಎಇಯಿಂದ ಸ್ವದೇಶಕ್ಕೆ ಮರಳಲು ಭಾರತೀಯರಿಗೆ 17 ಚಾರ್ಟರ್ಡ್ ವಿಮಾನಗಳನ್ನು ವ್ಯವಸ್ಥೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News