ಸಂಚಾರಿ ನಿಯಮ ಬಿಗಿಗೊಳಿಸಿದ ದುಬೈ | ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ 30 ದಿನ ವಾಹನ ವಶಕ್ಕೆ!

Update: 2024-10-26 13:08 GMT

ಸಾಂದರ್ಭಿಕ ಚಿತ್ರ | PC : X 

ದುಬೈ : ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ 30 ದಿನಗಳವರೆಗೆ ವಾಹನವನ್ನು ವಶಪಡಿಸಿಕೊಳ್ಳಲು ಅನುಮತಿಸುವ ನೂತನ ಕಾಯ್ದೆಯನ್ನು ದುಬೈ ಜಾರಿಗೆ ತಂದಿದೆ.

ಸಂಚಾರದ ವೇಳೆ ಮೊಬೈಲ್ ಫೋನ್ ಗಳ ಬಳಕೆ, ಅಂತರ ಕಾಯ್ದುಕೊಳ್ಳದೆ ವಾಹನಗಳ ಚಲಾವಣೆ, ಹಠಾತ್ ತಿರುವು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ವಾಹನವನ್ನು 30 ದಿನಗಳವರೆಗೆ ದುಬೈ ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದಾರೆ.

ದುಬೈ ಟ್ರಾಫಿಕ್ ಕಾನೂನು ಈ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ 400 ದಿರ್ಹಂ(9,158.52 ರೂ.)ನಿಂದ 1,000 ದಿರ್ಹಂ(22,896.31ರೂ.) ದಂಡವನ್ನು ವಿಧಿಸುತ್ತಿತ್ತು. ಹೊಸ ಕಾನೂನು ತಿದ್ದುಪಡಿಯಲ್ಲಿ ದುಬೈನಲ್ಲಿ ಈ ದಂಡದ ಜೊತೆಗೆ 30 ದಿನಗಳವರೆಗೆ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲು ಪೊಲೀಸರಿಗೆ ಅವಕಾಶ ಕಲ್ಪಿಸಿದೆ.

ಕ್ಲಿಯರ್ ಎಂದು ಖಚಿತಪಡಿಸಿಕೊಳ್ಳದೆ ವಾಹನಗಳನ್ನು ರಸ್ತೆಗೆ ಇಳಿಸುವುದು, ಜೀವ, ಸ್ವತ್ತು, ಸಂಚಾರ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ರೀತಿಯಲ್ಲಿ ವಾಹನವನ್ನು ಹಿಂದಕ್ಕೆ ಚಲಾಯಿಸುವುದು, ಲೇನ್ ತಪ್ಪಿಸುವುದು, ಕಾರಣವಿಲ್ಲದೆ ವಾಹನವನ್ನು ರಸ್ತೆ ಮಧ್ಯೆ ನಿಲ್ಲಿಸುವುದು, ಅಪಾಯಕಾರಿ ಓವರ್ ಟೇಕಿಂಗ್, ವಾಹನಗಳಲ್ಲಿ ಅಗತ್ಯ ಸುರಕ್ಷತೆ ಮತ್ತು ಭದ್ರತೆ ವ್ಯವಸ್ಥೆಗಳಿರದಿರುವುದು, ಲೈಸೆನ್ಸ್ ಇಲ್ಲದೆ ವಾಹನ ಚಾಲನೆ, ಅನುಮತಿಯಿಲ್ಲದೆ ವಾಹನದ ಬಣ್ಣದಲ್ಲಿ ಬದಲಾವಣೆಗಳನ್ನು ಮಾಡಿದರೆ ಘನ ವಾಹನಗಳಿಗೆ ಕೂಡ ಇದೇ ರೀತಿಯ ಶಿಕ್ಷೆಯನ್ನು ವಿಧಿಸಲಾಗುತ್ತದೆ. ತಿದ್ದುಪಡಿಯು ಈ ಅಪರಾಧಗಳಿಗೆ 14ದಿನಗಳವರೆಗೆ ವಾಹನವನ್ನು ವಶಪಡಿಸಿಕೊಳ್ಳಲು ಅವಕಾಶ ನೀಡುತ್ತದೆ.

ಅಜಾಗರೂಕ ಚಾಲನೆಗಾಗಿ ದುಬೈ ಹೆಚ್ಚುವರಿ ದಂಡವನ್ನು ಪರಿಚಯಿಸಿದ್ದು ಇದೇ ಮೊದಲಲ್ಲ. ಕಳೆದ ವರ್ಷ, ಗಂಭೀರ ಟ್ರಾಫಿಕ್ ಅಪರಾಧಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಬಿಡುಗಡೆ ಮಾಡಲು 50,000 ದಿರ್ಹಂ(11,44,815.50ರೂ.) ಶುಲ್ಕವನ್ನು ನಿಗದಿ ಪಡಿಸಿತ್ತು. ಇವುಗಳಲ್ಲಿ ಅಜಾಗರೂಕತೆಯ ಚಾಲನೆ, ಸಿಗ್ನಲ್ ಜಂಪ್ ಸೇರಿದೆ. ಈ ನಿಯಮಾವಳಿಗಳ ಮೂಲಕ ಹೆಚ್ಚಿನ ವಾಹನಗಳಿಗೆ ದಂಡ ವಿಧಿಸಲಾಗಿದೆ.

ಸೌಜನ್ಯ : khaleejtimes.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News