ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಎಸ್ ಎಂ ಸಯ್ಯದ್ ಖಲೀಲ್ ನಿಧನ

Update: 2024-11-21 00:21 GMT

ದುಬೈ : ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಹಾಗೂ ಮಾಧ್ಯಮ ಕಮ್ಯುನಿಕೇಶನ್ಸ್ ಲಿಮಿಟೆಡ್ ನ ಅಧ್ಯಕ್ಷ ಎಸ್ ಎಂ ಸಯ್ಯದ್ ಖಲೀಲ್ ಬುಧವಾರ ತಡರಾತ್ರಿ ದುಬೈ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಭಟ್ಕಳದ ಪ್ರಪ್ರಥಮ ಚಾರ್ಟರ್ಡ್ ಅಕೌಂಟೆಂಟ್ ಗಳಲ್ಲಿ ಒಬ್ಬರಾದ ಸಯ್ಯದ್ ಖಲೀಲ್ ಅವರು ' ಸಿ ಎ ಖಲೀಲ್ ' ಎಂದೇ ಚಿರಪರಿಚಿತರಾಗಿದ್ದ ಖ್ಯಾತ ಅನಿವಾಸಿ ಕನ್ನಡಿಗರಲ್ಲೊಬ್ಬರು. ದುಬೈ ಸಹಿತ ಗಲ್ಫ್ ದೇಶಗಳಲ್ಲಿ ಕನ್ನಡ ಹಾಗೂ ಕೊಂಕಣಿ ಭಾಷೆ ಹಾಗೂ ಸಂಸ್ಕೃತಿಯ ಕಂಪು ಹರಡುವಲ್ಲಿ ಮಹತ್ವದ ಕೊಡುಗೆ ನೀಡಿದವರು. ನೂರಾರು ಯುವಜನರಿಗೆ ಉದ್ಯೋಗ ಪಡೆಯಲು ನೆರವಾದವರು. ಭಟ್ಕಳ , ಮಂಗಳೂರು ಸಹಿತ ಹತ್ತಾರು ಕಡೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಂಘ ಸಂಸ್ಥೆಗಳಿಗೆ ಪೋಷಕರಾಗಿ, ಪದಾಧಿಕಾರಿಯಾಗಿ ಆಸರೆಯಾದವರು.

ಚಾರ್ಟರ್ಡ್ ಅಕೌಂಟೆಂಟ್ ಪದವಿ ಪಡೆದ ಬಳಿಕ ಭಾರತದಲ್ಲಿ ಕೆಲ ಸಮಯ ಮಹೀಂದ್ರ ಕಂಪೆನಿಯಲ್ಲಿ ಸೇವೆ ಸಲ್ಲಿಸಿ 1978 ರಲ್ಲಿ ದುಬೈಗೆ ಹೋದ ಅವರು ಅಲ್ಲಿನ ಪ್ರತಿಷ್ಠಿತ ಗಲದಾರಿ ಸಮೂಹ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರಿ ಅಲ್ಲೇ ದಶಕಗಳ ಕಾಲ ಸೇವೆ ಸಲ್ಲಿಸಿ ಅತ್ಯುನ್ನತ ಹುದ್ದೆಗೆ ತಲುಪಿ ಆ ಸಮೂಹದ ಅಭಿವೃದ್ಧಿಗೆ ನಿರ್ಣಾಯಕ ಕೊಡುಗೆ ನೀಡಿದವರು. ಬಳಿಕ ತಮ್ಮ ಸ್ವಂತ ಸಂಸ್ಥೆ ಕೆ ಎಂಡ್ ಕೆ ಎಂಟರ್ ಪ್ರೈಸಸ್ ಸ್ಥಾಪಿಸಿದರು.

ಭಟ್ಕಳದ ಅಂಜುಮನ್ ಹಾಮಿ ಎ ಮುಸ್ಲಿಮೀನ್, ರಾಬಿತಾ ಸೊಸೈಟಿ, ಸಹಿತ ಹಲವಾರು ಸಂಸ್ಥೆಗಳ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಹತ್ತಾರು ಶೈಕ್ಷಣಿಕ , ಧಾರ್ಮಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೇಶದ ಖ್ಯಾತ ರಾಜಕೀಯ, ಧಾರ್ಮಿಕ ನಾಯಕರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News