ಯುಎಇ: ತುಂಬೆ ಹಾಸ್ಪಿಟಲ್ ನಿಂದ ಮಧುಮೇಹ ಕುರಿತು ಜಾಗೃತಿ ವಾಕಥಾನ್
ಯುಎಇ: ವಿಶ್ವ ಮಧುಮೇಹ ದಿನದ ಅಂಗವಾಗಿ ಯುಎಇಯ ಫುಜೈರಾದಲ್ಲಿನ ತುಂಬೆ ಹಾಸ್ಪಿಟಲ್ ವತಿಯಿಂದ ನ.17ರಂದು ವಾಕಥಾನ್(Walkathon) ಆಯೋಜಿಸಲಾಗಿತ್ತು.
ಮಧುಮೇಹ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ವಾಕಥಾನ್ ನಲ್ಲಿ ವಿವಿಧ ವಲಯಗಳ 500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಫುಜೈರಾದ ತುಂಬೆ ಹಾಸ್ಪಿಟಲ್ ನಿಂದ ಪ್ರಾರಂಭವಾದ ವಾಕಥಾನ್ ಫುಜೈರಾ ಫುಟ್ಬಾಲ್ ಸ್ಟೇಡಿಯಂನಲ್ಲಿ ಸಮಾಪ್ತಿಗೊಂಡಿತು. ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಸಂದೇಶಗಳಿರುವ ಬ್ಯಾನರ್ ಗಳನ್ನು ಮತ್ತು ಪ್ಲಕಾರ್ಡ್ ಗಳನ್ನು ವಾಕಥಾನ್ ನಲ್ಲಿ ಭಾಗವಹಿಸಿದ್ದವರು ಪ್ರದರ್ಶಿಸಿದ್ದರು.
ವಾಕಥಾನ್ ಜೊತೆಯಲ್ಲೇ ತುಂಬೆ ಆಸ್ಪತ್ರೆಯು ಉಚಿತ ಬಿಪಿ ಮತ್ತು ಶುಗರ್ ಪರೀಕ್ಷೆಯನ್ನು ನಡೆಸಿದೆ.
ಫುಜೈರಾ ತುಂಬೆ ಹಾಸ್ಪಿಟಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮನೀಶ್ ಸಿಂಘಾಲ್ ಈ ವೇಳೆ ಮಾತನಾಡಿದ್ದು, ವಾಕಥಾನ್ ಮಧುಮೇಹ ತಡೆಗಟ್ಟುವಲ್ಲಿ ಆರೋಗ್ಯಕರ ಜೀವನಶೈಲಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದಲ್ಲದೆ, ದಿನನಿತ್ಯದ ಆರೋಗ್ಯ ತಪಾಸಣೆಯ ಮೌಲ್ಯವನ್ನು ಹೇಳುತ್ತದೆ ಎಂದು ಹೇಳಿದ್ದಾರೆ.
ತುಂಬೆ ಹೆಲ್ತ್ ಕೇರ್ ನ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ, ಮಧುಮೇಹ ನಮ್ಮಲ್ಲಿನ ಅತಿ ದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಅಭಿಯಾನ ಆರೋಗ್ಯಕರ ಜೀವನಶೈಲಿ ಅನುಸರಿಸಲು ಜನರನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಆರೋಗ್ಯದ ಬಗ್ಗೆ ಸರಿಯಾಗಿ ನಿಗಾ ವಹಿಸುವುದರಿಂದ ಮಧುಮೇಹ ಹೊಂದಿರುವ ವ್ಯಕ್ತಿಗಳು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದು ಹೇಳಿದ್ದಾರೆ.
ಫುಜೈರಾನಲ್ಲಿನ ತುಂಬೆ ಹಾಸ್ಪಿಟಲ್ ನ ಆಂತರಿಕ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಸಿ.ಆರ್. ಸತ್ಯನಾರಾಯಣನ್ ಮಾತನಾಡಿ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮುದಾಯವನ್ನು ಬೆಂಬಲಿಸುವ ತುಂಬೆ ಆಸ್ಪತ್ರೆಯ ಬದ್ಧತೆಯನ್ನು ಈ ಕಾರ್ಯಕ್ರಮವು ಪ್ರತಿಬಿಂಬಿಸುತ್ತದೆ. ಈ ಕಾರ್ಯಕ್ರಮಗಳ ಮೂಲಕ ಜನರು ಸಕಾರಾತ್ಮಕ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಫುಜೈರಾದ ತುಂಬೆ ಆಸ್ಪತ್ರೆ 60 ಹಾಸಿಗೆಗಳ ಪೂರ್ಣ ಪ್ರಮಾಣದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುತ್ತದೆ. ಆಸ್ಪತ್ರೆಯಲ್ಲಿ ವಿವಿಧ ವಿಶೇಷ ಘಟಕಗಳು, ಅನುಭವಿ ವೈದ್ಯರು ಸೇರಿದಂತೆ ಉತ್ತಮ ಸೌಲಭ್ಯಗಳಿವೆ ಎಂದು ಪ್ರಕಟನೆ ತಿಳಿಸಿದೆ.