ವಿಶ್ವ ಅಧಿಕ ರಕ್ತದೊತ್ತಡ ದಿನ: ಫುಜೈರಾದ ತುಂಬೆ ಹಾಸ್ಪಿಟಲ್‌ನಲ್ಲಿ ಜಾಗೃತಿ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣೆ

Update: 2024-05-23 14:45 GMT

ಫುಜೈರಾ(ಯುಎಇ): ಅಧಿಕ ರಕ್ತದೊತ್ತಡ ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವುದರ ಪ್ರಾಮುಖ್ಯವನ್ನು ಗುರುತಿಸಿ ವಿಶ್ವ ಅಧಿಕ ರಕ್ತದೊತ್ತಡ ದಿನದ ಅಂಗವಾಗಿ ಯುಎಇಯ ಫುಜೈರಾದ ತುಂಬೆ ಹಾಸ್ಪಿಟಲ್‌ನಲ್ಲಿ ಎಮಿರೇಟ್ಸ್ ರೆಡ್ ಕ್ರೆಸೆಂಟ್ ಸಹಯೋಗದಲ್ಲಿ ಪರಿಣಾಮಕಾರಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಕಾರ್ಪೊರೇಟ್ ಕಂಪನಿಗಳಲ್ಲಿ ಸಮಾಲೋಚನೆಗಳು ಮತ್ತು ಆರೋಗ್ಯ ತಪಾಸಣೆ ಹಾಗೂ ಆಸ್ಪತ್ರೆಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ನಿಯಮಿತವಾಗಿ ವೈದ್ಯರ ಭೇಟಿ, ಔಷಧಿಗಳ ಕ್ರಮಬದ್ಧ ಸೇವನೆ ಮತ್ತು ವೈದ್ಯಕೀಯ ಸಲಹೆಗಳ ಅನುಸರಣೆಯ ಮೂಲಕ ತಮ್ಮ ರಕ್ತದೊತ್ತಡವನ್ನು ಯಶಸ್ವಿಯಾಗಿ ನಿರ್ವಹಿಸಿರುವ ರೋಗಿಗಳನ್ನು ಗುರುತಿಸಿ ಅವರನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣದ ಮೇಲೆ ನಿಗಾಯಿರಿಸುವ ಸಾಧನಗಳು ಸೇರಿದಂತೆ ವಿವಿಧ ಉಡುಗೊರೆಗಳನ್ನು ಸ್ವೀಕರಿಸಿದರು. ತಮ್ಮ ಆರೋಗ್ಯದ ಕಾಳಜಿಗಾಗಿ ರೋಗಿಗಳಿಗೆ ಇನ್ನಷ್ಟು ಬೆಂಬಲಾರ್ಥ ಆಸ್ಪತ್ರೆಯು ವಿಶೇಷ ಅಧಿಕ ರಕ್ತದೊತ್ತಡ ಪ್ಯಾಕೇಜ್‌ನ್ನು ಈ ಸಂದರ್ಭದಲ್ಲಿ ಪರಿಚಯಿಸಿತು.

ತುಂಬೆ ಹಾಸ್ಪಿಟಲ್‌ನ ವೈದ್ಯಕೀಯ ನಿರ್ದೇಶಕ ಹಾಗೂ ಇಂಟರ್ನಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಸಿ.ಆರ್.ಸತ್ಯನಾರಾಯಣ ಅವರು ಅಧಿಕ ರಕ್ತದೊತ್ತಡದ ಚಿಹ್ನೆಗಳು ಮತ್ತು ಲಕ್ಷಣಗಳ ಕುರಿತು ಮಾಹಿತಿಗಳನ್ನು ಒದಗಿಸಿದರು. ಅಧಿಕ ರಕ್ತದೊತ್ತಡವು ಸಮಾಜದಲ್ಲಿ ಎಲ್ಲ ವಯೋಗುಂಪಿನವರಲ್ಲಿ ಹೆಚ್ಚು ಪ್ರಚಲಿತವಾಗಿದೆ ಎಂದು ಒತ್ತಿ ಹೇಳಿದ ಅವರು,ವ್ಯಾಪಕ ಜಾಗೃತಿ ಮತ್ತು ಪೂರ್ವಭಾವಿ ನಿರ್ವಹಣೆಯ ಅಗತ್ಯವನ್ನು ಎತ್ತಿ ತೋರಿಸಿದರು.

ಅಧಿಕ ರಕ್ತದೊತ್ತಡದೊಂದಿಗೆ ಗುರುತಿಸಿಕೊಂಡಿರುವ ಪ್ರಮುಖ ಆರೋಗ್ಯ ಅಪಾಯಗಳನ್ನು ಬೆಟ್ಟು ಮಾಡಿದ ಡಾ.ಸತ್ಯನಾರಾಯಣ,ಸಾಮಾನ್ಯವಾಗಿ ಹೈ ಬಿಪಿ ಎಂದು ಕರೆಯಲಾಗುವ ಅಧಿಕ ರಕ್ತದೊತ್ತಡವು ತನ್ನ ಲಕ್ಷಣರಹಿತ ಸ್ವಭಾವದಿಂದಾಗಿ ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ,ಹೀಗಾಗಿ ಅದರ ಮೇಲೆ ನಿಯಮಿತ ನಿಗಾ ಅಗತ್ಯವಾಗಿದೆ. ಹೃದಯಾಘಾತ,ಹೃದಯ ವೈಫಲ್ಯ, ಮೂತ್ರಪಿಂಡ ವೈಫಲ್ಯ,ಮಿದುಳಿನ ಆಘಾತ,ಪಾರ್ಶ್ವವಾಯು ಮತ್ತು ಜ್ಞಾಪಕ ಶಕ್ತಿ ನಷ್ಟದಂತಹ ಹಲವಾರು ಆರೋಗ್ಯ ಅಪಾಯಗಳು ಅಧಿಕ ರಕ್ತದೊತ್ತಡದ ಬಳುವಳಿಯಾಗಿವೆ. ಸಾಮಾನ್ಯ ರಕ್ತದೊತ್ತಡ ಮಟ್ಟವು ವಯಸ್ಕರಿಗೆ ಗರಿಷ್ಠ 140 ಎಂಎಂ ಎಚ್‌ಜಿ ಮತ್ತು ಕನಿಷ್ಠ 90 ಎಂಎಂ ಎಚ್‌ಜಿ ಹಾಗೂ ಮಧುಮೇಹಿಗಳಲ್ಲಿ ಹೆಚ್ಚುವರಿ ಹೃದಯನಾಳ ಅಪಾಯಗಳನ್ನು ತಪ್ಪಿಸಲು 130/80 ಎಂಎಂ ಎಚ್‌ಜಿಗೆ ಸನಿಹದಲ್ಲಿರಬೇಕು ಎಂದು ವಿವರಿಸಿದರು.

ಅಧಿಕ ರಕ್ತದೊತ್ತಡವನ್ನು ತಡೆಗಟ್ಟುವ ಕ್ರಮಗಳ ಮಹತ್ವವನ್ನು ಪ್ರಮುಖವಾಗಿ ಬಿಂಬಿಸಿದ ಅವರು,ಪ್ರತಿದಿನ ವ್ಯಾಯಾಮ,ಧೂಮಪಾನ ವರ್ಜನೆ,ಶರೀರದ ಜಲೀಕರಣ,ರಕ್ತದೊತ್ತಡದ ನಿಯಮಿತ ತಪಾಸಣೆ,ಕಡಿಮೆ ಉಪ್ಪು ಸೇವನೆಯೊಂದಿಗೆ ಮತ್ತು ಒತ್ತಡಗಳಿಗೆ ಒಳಗಾಗದೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಪ್ರತಿಯೊಬ್ಬರನ್ನೂ ಆಗ್ರಹಿಸಿದರು. ಅಧಿಕ ರಕ್ತದೊತ್ತಡದೊಂದಿಗೆ ಗುರುತಿಸಿಕೊಂಡಿರುವ ಗಂಭೀರ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಆರಂಭಿಕ ಪತ್ತೆ ಮತ್ತು ಹಸ್ತಕ್ಷೇಪ ನಿರ್ಣಾಯಕವಾಗಿವೆ ಎಂದರು.

ತುಂಬೆ ಹಾಸ್ಪಿಟಲ್ 60 ಹಾಸಿಗೆಗಳ ಪೂರ್ಣ ಪ್ರಮಾಣದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು,ಕೈಗೆಟಕುವ ದರಗಳಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುತ್ತಿದೆ. ಆಸ್ಪತ್ರೆಯು ತಜ್ಞ ಮತ್ತು ಅನುಭವಿ ವೈದ್ಯರು,ತಂತ್ರಜ್ಞರು ಮತ್ತು ತರಬೇತುಗೊಂಡ ದಾದಿಯರಿಂದ ಬೆಂಬಲದೊಂದಿಗೆ ವಿವಿಧ ವಿಶೇಷ ವಿಭಾಗಗಳು ಮತ್ತು ಸೇವೆಗಳನ್ನು ಹೊಂದಿದೆ. ಯುಎಇಯ ಆರೋಗ್ಯ ಸಚಿವಾಲಯ ಮತ್ತು ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಮಾನ್ಯತೆಯನ್ನು ಪಡೆದಿದೆ. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News