ʼಗ್ಯಾರಂಟಿʼಗಳಿಂದ ಬಡ ಕುಟುಂಬಗಳಿಗೆ ವಾರ್ಷಿಕವಾಗಿ 50 ರಿಂದ 60 ಸಾವಿರ ಉಳಿತಾಯ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-03-01 11:24 GMT

Photo : X/@DKShivakumar

ಹಾಸನ: "ಗ್ಯಾರಂಟಿ ಯೋಜನೆಗಳಿಂದ ಒಂದು ಬಡ ಕುಟುಂಬಕ್ಕೆ ವಾರ್ಷಿಕ 50-60 ಸಾವಿರ ಉಳಿತಾಯವಾಗುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು‌.

ಹಾಸನದಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, "1.56 ಕೋಟಿ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್‌ ನೀಡುವುದರ ಜೊತೆಗೆ 1.50 ರೂ. ವಿದ್ಯುತ್ ದರ ಇಳಿಸಿದ್ದೇವೆ. ಇದಕ್ಕೆ ವಿರೋಧ ಪಕ್ಷಗಳು ಏನು ಹೇಳುತ್ತವೆ. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ್ದ ಕುಮಾರಸ್ವಾಮಿ, ಆರ್‌. ಅಶೋಕ್‌ ಅವರು ಇದಕ್ಕೆ ಉತ್ತರಿಸಲಿ" ಎಂದರು.

ವಸ್ತುಗಳ ಬೆಲೆ ಏರಿಕೆಯಾಗಿತ್ತು. ಬಿಜೆಪಿಯವರು ವಿದ್ಯುತ್‌ ಬೆಲೆ ಏರಿಕೆ ಮಾಡಿದ್ದರು. ನಾವು ಉಚಿತವಾಗಿ ವಿದ್ಯುತ್‌ ನೀಡುವುದರ ಜೊತೆಗೆ ಬೆಲೆ ಇಳಿಕೆ ಮಾಡಿದ್ದೇವೆ. ಗೃಹಲಕ್ಷ್ಮೀ ಯೋಜನೆಯಿಂದ ಅತ್ತೆ-ಸೊಸೆ ಜಗಳವಾಡುತ್ತಾರೆ ಎಂದು ಗುಲ್ಲೆಬ್ಬಿಸಿದರು. ಯಾವುದಾದರೂ ಮನೆಯಲ್ಲಿ ಜಗಳ ಉಂಟಾಗಿದೆಯೇ? ಎಂದು ಪ್ರಶ್ನಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು,  “ಶಕ್ತಿ ಯೋಜನೆಯಿಂದ ದೇವಸ್ಥಾನಕ್ಕೆ ಜನ ಹೆಚ್ಚು ಬರುತ್ತಿದ್ದಾರೆ. ಹುಂಡಿ ತುಂಬಿ ತುಳುಕುತ್ತಿದೆ. ಸಿದ್ದರಾಮಯ್ಯ ಅವರ ಮತ್ತು ಡಿ.ಕೆ.ಶಿವಕುಮಾರ್‌ ಅವರ ಹೆಸರಿನಲ್ಲಿ ಮಹಿಳೆಯರು ಅರ್ಚನೆ ಮಾಡಿಸುತ್ತಿದ್ದಾರೆ” ಎಂದು ಪತ್ರ ಬರೆದಿದ್ದರು.

ಜನರ ಪ್ರಾರ್ಥನೆ ಎಂದಿಗೂ ಮೋಸ ಮಾಡುವುದಿಲ್ಲ. ಮಹಿಳೆಯರು ರಾಜ್ಯದ ನಾನಾ ದೇವಸ್ಥಾನಗಳನ್ನು ನೋಡುತ್ತಿದ್ದಾರೆ. ಮಕ್ಕಳನ್ನು ಕರೆದುಕೊಂಡು ಹೋಗಿ ದರ್ಶನ ಮಾಡಿಸುತ್ತಿದ್ದಾರೆ. ತವರು ಮನೆಗೆ ಹೋಗಿ ಬರುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ನಾವು ಧರ್ಮವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದಿಲ್ಲ

ದೇವರು ಬೇರೆ, ರಾಜಕಾರಣ ಬೇರೆ. ನಾವು ಧರ್ಮವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದಿಲ್ಲ. ಈ ಬಾರಿಯ ಸದನದಲ್ಲಿ ನಮ್ಮ ಸರಕಾರ ಸಣ್ಣ ದೇವಸ್ಥಾನಗಳ ಅಭಿವೃದ್ಧಿಗೆ ಮತ್ತು ಅರ್ಚಕರಿಗೆ ಸಹಾಯ ಮಾಡುವ ಕಾನೂನು ತರಲು ಹೊರಟೆವು. ಆದರೆ ಬಿಜೆಪಿಯವರು ಅದಕ್ಕೆ ವಿರೋಧಿಸಿದರು.

ಪ್ರತಿ ಗ್ರಾಮದಲ್ಲಿ ಇರುವ ಹನುಮಂತ, ಮಾರಮ್ಮ ಸೇರಿದಂತೆ ಸಣ್ಣ ದೇವಾಲಯಗಳನ್ನು ಅಭಿವೃದ್ಧಿ ಮಾಡಲು ಕಾನೂನು ತಂದರೆ ವಿರೋಧಿಸಿದರು. ನಮಗೆ ಜಾತಿ ಮುಖ್ಯವಲ್ಲ ನೀತಿ ಮುಖ್ಯ. ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಭಾವನೆಗಳ ಮೇಲೆ ಅಲ್ಲ. ನಾವು ಕೇವಲ ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಮಾತ್ರ ಯೋಜನೆಗಳನ್ನು ನೀಡಿಲ್ಲ. ಎಲ್ಲರಿಗೂ ನೀಡಿದ್ದೇವೆ ಎಂದರು.

ಈ ಹಿಂದೆ ನಮ್ಮ ಸರಕಾರ ಇದ್ದಾಗ ಸಹಕಾರಿ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಿದ್ದೆವು. ಆದರೆ ಆ ಹಣ ಬಿಡುಗಡೆಯಾಗಿರಲಿಲ್ಲ. ಸಿಎಂ ಮತ್ತು ರಾಜಣ್ಣ ಅವರ ಕಾಳಜಿಯಿಂದ ಈ ಹಣ ಬಿಡುಗಡೆ ಮಾಡಿ ಸಹಕಾರಿ ಸಂಘ ಮತ್ತು ರೈತರಿಗೆ ಬೆನ್ನೆಲುಬಾಗಿದ್ದೇವೆ. ನಿಮ್ಮ ಸೇವೆಗೆ ನಾವು ಸದಾ ಸಿದ್ಧ. ಉತ್ತಮವಾದ ಅಧಿಕಾರ ನೀಡುತ್ತೇವೆ. ಮುಂದಕ್ಕೂ ನೀವು ನಮ್ಮ ಕೈ ಹಿಡಿಯುತ್ತೀರಾ ಎಂದು ನಂಬಿದ್ದೇವೆ ಎಂದು ಹೇಳಿದರು.

ಬಡವರ ಪರವಾಗಿ ನಾವು ಹೋರಾಟ ಮಾಡುತ್ತೇವೆ. ಬಡತನದ ವಿರುದ್ದ ಹೋರಾಟ ಮಾಡುತ್ತೇವೆ. ಇಂದಿರಾಗಾಂಧಿ, ದೇವರಾಜ ಅರಸು, ಬಂಗಾರಪ್ಪ ಅವರ ಕಾಲದಲ್ಲಿ ಜನರಿಗೆ ಮನೆ, ಭೂಮಿಯನ್ನು ಕಾಂಗ್ರೆಸ್ ಸರಕಾರ ನೀಡಿದೆ. ನಾವು ನುಡಿದಂತೆ ನಡೆದಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News