ಅರೇಹಳ್ಳಿ: ಹಿರಾ ಪಬ್ಲಿಕ್ ಸ್ಕೂಲ್ ವತಿಯಿಂದ ಪೋಷಕರ ಕಾರ್ಯಾಗಾರ

Update: 2024-02-18 07:54 GMT

ಹಾಸನ: "ಇಂದು ನಾವು ಮನುಷ್ಯರಿಗಿಂತ ವಸ್ತುಗಳನ್ನು ಬಹಳವಾಗಿ ಪ್ರೀತಿಸುತ್ತಿದ್ದೇವೆ, ಅಕಸ್ಮಾತ್ ಅಪ್ಪಿತಪ್ಪಿ ಮಕ್ಕಳಿಂದ ಏನಾದರೂ ತಪ್ಪು ಸಂಭವಿಸಿದರೆ ತಕ್ಷಣ ಅವರನ್ನು ಗದರಿಸುವ ಪ್ರವೃತ್ತಿ ಇಂದಿನ ಹೆಚ್ಚಿನ ಪಾಲಕರಲ್ಲಿ ಬೆಳೆಯುತ್ತಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದೆ ಎಂದು ಇಕ್ರಾ ಅಕಾಡೆಮಿ ಅಂಕೋಲಾ (ಮಹಾರಾಷ್ಟ್ರ) ಇದರ ನಿರ್ದೇಶಕರೂ ಖ್ಯಾತ ವಾಗ್ಮಿಯು ಆದ ಇಂಜಿನಿಯರ್ ಮುಹಮ್ಮದ್ ಶಕೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿರಾ ಪಬ್ಲಿಕ್ ಸ್ಕೂಲ್ ಅರೇಹಳ್ಳಿ ಇದರ ವತಿಯಿಂದ ಹಮ್ಮಿಕೊಂಡ ಪೋಷಕರ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಭಿಕರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

"ಮಕ್ಕಳೊಂದಿಗೆ ಕಾಳಜಿಯಿಂದ ಸಮಾಲೋಚಿಸಿ ಅವರನ್ನು ತಮ್ಮ ಆಪ್ತರನ್ನಾಗಿಸಿಕೊಳ್ಳುವ ಕೆಲಸ ಪೋಷಕರಿಂದ ನಡೆಯಬೇಕು. ಮಕ್ಕಳನ್ನು ಹೊಗಳುವ, ಹುರಿದುಂಬಿಸುವ ತಂದೆ ತಾಯಿಗಳ ಅಗತ್ಯ ಇಂದಿನ ಸಮಾಜಕ್ಕಿದೆ ಎಂದು ಹೇಳಿದರು.

ಬೋರ್ಡ್ ಆಫ್ ಎಜುಕೇಶನ್ ಕರ್ನಾಟಕ ಇದರ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಅವರು ಮಾತನಾಡಿ " ಪರಿಗಣನೆ ಮತ್ತು ಸಮಾಲೋಚನೆಯಲ್ಲಿ ಪಾಲ್ಗೊಂಡ ಮಕ್ಕಳು ಬೆಳೆದು ಬರುವಾಗ ಮಾನಸಿಕವಾಗಿ ಆರೋಗ್ಯವಂತ ನಾಯಕತ್ವ ಗುಣಗಳನ್ನು ಹೊಂದುತ್ತಾರೆ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿರಾ ಪಬ್ಲಿಕ್ ಸ್ಕೂಲ್ ಇದರ ಕಾರ್ಯದರ್ಶಿ ಮುಜೀಬ್ ರಹ್ಮಾನ್ ಪ್ರಸ್ತಾವಿಕ ಭಾಷಣ ಮಾಡಿದರು, ಝುಬೈರ್ ಅಹ್ಮದ್  ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ಹಿರಾ ಪಬ್ಲಿಕ್ ಸ್ಕೂಲ್ ಇದರ ಅಧ್ಯಕ್ಷ ಮೌಲಾನ ಇಝ್ ಹಾರ್ ಅಸರ್ ಉಮ್ರಿ, ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಮೌಲಾನಾ ಅಬ್ದುಲ್ಲಾಹ್ ಉಮ್ರಿ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News