ಹಾಸನ ಕಾಂಗ್ರೆಸ್ ಸಭೆಯಲ್ಲಿ ಸಚಿವ ಕೆ.ಎನ್ ರಾಜಣ್ಣ, ಕಾರ್ಯಕರ್ತರ ನಡುವೆ ವಾಗ್ವಾದ
ಹಾಸನ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಸಚಿವ ಕೆ.ಎನ್ ರಾಜಣ್ಣ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಕೆಲ ಸಮಯ ಗದ್ದಲ ಉಂಟಾದ ಪ್ರಸಂಗ ನಡೆಯಿತು.
ಅರಕಲಗೂಡು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಶ್ರೀಧರ್ ಗೌಡ ಅವರು ಮಾತನಾಡಿ, "ಈ ಬಾರಿ ಅರಕಲಗೂಡಿನಲ್ಲಿ 30 ಸಾವಿರ ಲೀಡ್ ಕೊಡಿಸುತ್ತೇವೆ ಎಂದರು. ಅದಾದ ಬಳಿಕ ಸಚಿವ ಕೆ. ಎನ್ ರಾಜಣ್ಣ ಶ್ರೀಧರ್ ಗೌಡ ಮಾತನ್ನು ತನ್ನ ಭಾಷಣದಲ್ಲಿ ಉಲ್ಲೇಖಿಸಿ "30 ಸಾವಿರ ಲೀಡ್ ನೀಡೋನು ಯಾಕಪ್ಪ ಮೂರನೇ ಸ್ಥಾನಕ್ಕೆ ಹೋದೆ" ಎಂದು ಪ್ರಶ್ನೆ ಮಾಡಿದರು.
ಈ ವೇಳೆ ರಾಜಣ್ಣ ವಿರುದ್ಧ ಮುಗಿಬಿದ್ದ ಶ್ರೀಧರ್ ಅಭಿಮಾನಿಗಳು, ರಾಜಣ್ಣ ಭಾಷಣಕ್ಕೆ ಅಡ್ಡಿಪಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದಾದ ಬಳಿಕ ಮತ್ತೆ ಭಾಷಣ ಮುಂದುವರೆಸಿದ ರಾಜಣ್ಣ, "ಇವರ ಗದ್ದಲಕ್ಕೆ ತಾನು ತಲೆ ಕೆಡಿಕೊಳ್ಳಲ್ಲ. ಇಂತಹ ಬಾಡಿಗೆ ಗಿರಾಕಿಗಳ ಕೂಗಾಟಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ" ಎಂದರು.
ಕೆ.ಎನ್ ರಾಜಣ್ಣ ಅವರ ಮಾತಿಗೆ ರೊಚ್ಚಿಗೆದ್ದ ಶ್ರೀಧರ್ ಗೌಡ ಬೆಂಬಲಿಗರು, ರಾಜಣ್ಣ ವಿರುದ್ದ ತೀರ್ವ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಗೆ ಹೊಸದಾಗಿ ಕಾಂಗ್ರೆಸ್ ಉಸ್ತುವಾರಿಯಾಗಿ ಬಂದಿರುವ ಸಂಸದ ಚಂದ್ರಶೇಖರ್ ಅವರೇ ಕಾರ್ಯಕರ್ತರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ನಂತರ ಸ್ವತಃ ಶ್ರೀಧರ್ ಗೌಡ ಅವರೇ ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸಿದರು.
ಕಾರ್ಯಕರ್ತರನ್ನ ನಿಯಂತ್ರಿಸಲು ಮುಖಂಡರ ಹರಸಾಹಸ ಪಟ್ಟು ಬಳಿಕ ಗಲಾಟೆ ಮಾಡಿದ ಕಾರ್ಯಕರ್ತರ ವಿರುದ್ಧ ಜಿಲ್ಲಾ ಮುಖಂಡರು ವಾಗ್ದಾಳಿ ನಡೆಸಿದರು. ಈ ವೇಳೆ ವೇದಿಕೆ ಕೆಳಗೆ ಕೈ ಕೈ ಮಿಲಾಯಿಸಲು ಮುಂದಾದ ಕಾರ್ಯಕರ್ತರ ಗಲಾಟೆಯಿಂದ ಚುನಾವಣಾ ಉಸ್ತುವಾರಿ ಚಂದ್ರಶೇಖರ್ ಮುಜುಗರಕ್ಕೆ ಒಳಗಾದರು.