ಜೆಡಿಎಸ್ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಲು ರೇವಣ್ಣ ನೇತೃತ್ವದಲ್ಲಿ ಶೀಘ್ರದಲ್ಲೇ ಬೃಹತ್ ಸಮಾವೇಶ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

Update: 2024-07-21 18:34 GMT

ಹಾಸನ: ಲೋಕಸಭೆ ಚುನಾವಣೆ ವೇಳೆ ಮತ್ತು ನಂತರ ಅದ ಬೆಳವಣಿಗೆ ಬಗ್ಗೆ ಕಾರ್ಯಕರ್ತರಲ್ಲಿ ನಿರಾಸೆ ಮೂಡಿದ್ದು, ಜಿಲ್ಲೆಯ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ನೈತಿಕ ಸ್ಥೆರ್ಯ ತುಂಬಲು ಹೆಚ್.ಡಿ. ರೇವಣ್ಣ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ನಗರದ ರಿಂಗ್ ರಸ್ತೆ ಬಳಿ ಇರುವ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುಮಾರಣ್ಣ ಹಾಸನ ಜಿಲ್ಲೆಗೆ ಬರಬೇಕೆಂದು ಕಾರ್ಯಕರ್ತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಲಾಪ ಮುಗಿದ ನಂತರ ಹಾಸನದಲ್ಲಿ ರೇವಣ್ಣ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಲು ಯೋಚಿಸಿದ್ದೇನೆ. ಕಳೆದ ಲೋಕಸಭಾ ಚುನಾವಣೆ ನಂತರ ಪ್ರಥಮ ಬಾರಿಗೆ ಹಾಸನ ಜಿಲ್ಲೆಯಲ್ಲಿ ಆಗಿರುವ ಅನಾಹುತ ನೋಡಲು ಬಂದಿದ್ದೇನೆ. ಚುನಾವಣೆ ಫಲಿತಾಂಶ ನಂತರ, ಚುನಾವಣೆ ಆಸುಪಾಸಿನಲ್ಲಿ ಕೆಲವು ಅಹಿತರಕರ ಘಟನೆಗಳು ಪಕ್ಷದ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ನಿರಾಸೆ ಮೂಡಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದೆ ಹಾಸನ ಜಿಲ್ಲೆಯ ಕಾರ್ಯಕರ್ತರಿಗೆ ನೈತಿಕ ಸ್ಥೆರ್ಯ ತುಂಬಲು ಬರುತ್ತೇನೆ. ಹಾಸನದಲ್ಲಿ ಬೃಹತ್ ಸಮಾವೇಶ ಮಾಡುವಂತೆ ಶಾಸಕರ ಒತ್ತಾಯ ಇದೆ. ರೇವಣ್ಣ ಅವರ ನೇತೃತ್ವದಲ್ಲಿ ಶಾಸಕರುಗಳನ್ನೊಳಗೊಂಡು ನಾನು ಸೇರಿ ಪಕ್ಷ ಸಂಘಟನೆ ಮಾಡುತ್ತೇವೆ. ಈ ಜಿಲ್ಲೆಯ ಜನರ ಋಣವನ್ನು ತೀರಿಸುತ್ತೇವೆ. ಈಗ ರೇವಣ್ಣ ಅವರ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿವೆ. ಆದರೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಯಾರೂ ಮರೆಯುವಂತಿಲ್ಲ. ಎಲ್ಲರಿಗಿಂತ ಒಂದು ಹೆಜ್ಜೆ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ.ಇಲ್ಲಿನ ರೈತರಿಗೆ ಆರ್ಥಿಕ ಶಕ್ತಿ ತುಂಬಲು ಅದನ್ನು ಮಾಡುತ್ತಿದ್ದಾರೆ ಎಂದರು.

ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಲವಾರು ಯೋಜನೆಗಳನ್ನ ತರುವ ವ್ಯವಸ್ಥೆ ಆಗುತ್ತಿದೆ. ಕೇಂದ್ರದಲ್ಲಿ ನನಗೂ ಎರಡು ಜವಾಬ್ದಾರಿ ನೀಡಿದ್ದಾರೆ. ಆರ್ಥಿಕ ಸಮಿತಿ, ನೀತಿ ಆಯೋಗದ ಸದಸ್ಯನಾಗಿ ನೇಮಿಸಿದ್ದಾರೆ. ಇದೆಲ್ಲದರ ಜೊತೆ ನಾನು ಪ್ರಾಮಾಣಿಕವಾಗಿ ಜನರಿಗೆ ಕೆಲಸ ಮಾಡುತ್ತೇನೆ. ದೇವೇಗೌಡರ ಮೇಲಿನ ವಿಶ್ವಾಸ ಮತ್ತು ನಾನು ಮುಖ್ಯಮಂತ್ರಿ ಆಗಿ ಮಾಡಿದ ಕೆಲಸ ಗಮನಿಸಿ ಅಧಿಕಾರ ನೀಡಿದ್ದಾರೆ. ದೇವೇಗೌಡರ ನಿರೀಕ್ಷೆ ಮತ್ತು ರಾಜ್ಯದ ಜನರ ಒಳಿತಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ, ಎ. ಮಂಜು, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಲಕ್ಷ್ಮಣ್, ಮಾಧ್ಯಮ ವಕ್ತಾರ ಹೊಂಗೆರೆ ರಘು, ಸ್ವಾಮಿಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News