ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಮರ ಕಡಿತಲೆ ಪ್ರಕರಣ ; ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ, ನಾಲ್ವರ ಅಮಾನತು

Update: 2023-12-29 17:36 GMT

ಬೆಂಗಳೂರು: ಬೇಲೂರು ತಾಲೂಕಿನ ನಂದಗೋಡನಹಳ್ಳಿಯ 10 ಎಕರೆ ಪ್ರದೇಶದಲ್ಲಿ 126 ಮರಗಳನ್ನು ಕಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ , ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮೋಹನ್ ಕುಮಾರ್ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಬಾಕಿಯಿರಿಸಿ ಅಮಾನತು ಮಾಡಲಾಗಿದೆ.

ಹಾಸನ ಉಪ ವಿಭಾಗದ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಭುಗೌಡ ಬಿರಾದಾರ, ಬೇಲೂರು ಅರಣ್ಯಾಧಿಕಾರಿ ವಲಯ ಅಧಿಕಾರಿ ವಿನಲ್ ಕುಮಾರ್, ವಲಯದ ಉಪ ವಲಯ ಅರಣ್ಯಾಧಿಕಾರಿ ಡಿ.ಗುರುರಾಜ್, ಅರಣ್ಯ ಗಸ್ತು ಪಾಲಕ ಚ್.ಬಿ.ರಘುಕುಮಾ‌ರ್ ಅವರು ಅಮಾನತುಗೊಂಡ ಇತರರು.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೋಡನಹಳ್ಳಿ ಗ್ರಾಮದ ಸರ್ವೆ ನಂಬರ್ 16ರಲ್ಲಿ ಅಕ್ರಮವಾಗಿ ಮರಗಳನ್ನ ಕಡಿದು ಸಾಗಿಸಲು ಯತ್ನಿಸಲಾಗಿತ್ತು. ಬೇಲೂರು ತಹಸೀಲ್ದಾರ್ ಮಮತಾ ಅವರ ಸಮಯ ಪ್ರಜ್ಞೆಯಿಂದ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ, “ಕೋಟ್ಯಂತರ ರೂ. ಮೌಲ್ಯದ ಮರಗಳ ಮಾರಣ ಹೋಮ” ಎಂಬ ಶೀರ್ಷಿಕೆಯಲ್ಲಿ ಡಿಸೆಂಬರ್ 18 ರಂದು ವಾರ್ತಾಭಾರತಿ ಸುದ್ದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ್ದ, ಅರಣ್ಯ ಸಚಿವರು ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಈ ಬಗ್ಗೆ ವರದಿ ನೀಡಿದ್ದ ಹಾಸನ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸರಕಾರಿ ಅರಣ್ಯ ಭೂಮಿಯಲ್ಲಿ ಮರಗಳನ್ನು ಕಡಿದ ಪ್ರಕರಣದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕರ್ತವ್ಯಲೋಪದ ಬಗ್ಗೆ ವರದಿ ನೀಡಿದ್ದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ಕಾರ್ಯದರ್ಶಿ ಪ್ರಸನ್ನ ಕುಮಾರ್ ವಿ, ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮೋಹನ್ ಕುಮಾರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇತರ ಸಿಬ್ಬಂದಿಗಳನ್ನು ಅಮಾನತು ಮಾಡಿ ಅರಣ್ಯ ಇಲಾಖೆಯ ಉಪ ಕಾರ್ಯದರ್ಶಿ ಬಿ. ವೆಂಕಟೇಶಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News