ಮಡೆನೂರು: ದಲಿತರಿಗೆ ದೇವಾಲಯಕ್ಕೆ ಮುಕ್ತ ಪ್ರವೇಶ
ಹಾಸನ: ತಾಲೂಕಿನ ಶಾಂತಿ ಗ್ರಾಮ ಹೋಬಳಿಯ ಮಡೆನೂರು ಗ್ರಾಮದ ಗ್ರಾಮ ದೇವತೆ ಸತ್ತಿಗರಹಳ್ಳಿ ಅಮ್ಮ ದೇವಾಲಯಕ್ಕೆ ರವಿವಾರ ಜಿಲ್ಲಾಡಳಿತದ ಸಮ್ಮುಖದಲ್ಲಿ ಪೊಲೀಸ್ ಬಂದೋಬಸ್ತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಗ್ರಾಮದ ದಲಿತರು ದೇವಾಲಯ ಪ್ರವೇಶ ಮಾಡುವ ಮೂಲಕ ಪ್ರವೇಶ ನಿರ್ಬಂಧ ಪ್ರಕರಣ ಸುಖಾಂತ್ಯ ಕಂಡಿರುವುದು ವರದಿಯಾಗಿದೆ
ಹಲವು ವರ್ಷಗಳಿಂದ ದಲಿತ ಸಮುದಾಯಕ್ಕೆ ದೇವಾಲಯ ಪ್ರವೇಶ ನಿರಾಕರಿಸಲಾಗಿತ್ತು. ಫೆ.29ರಂದು ದೇವಾಲಯದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ರಾಮನಾಥಪುರಕ್ಕೆ ಬಸ್ ನಲ್ಲಿ ಕಳಸವನ್ನು ಪೂಜೆಗೆಂದು ತೆಗೆದುಕೊಂಡು ಹೋಗುವಾಗ ಬಸ್ ನಲ್ಲಿ ದೇವರ ಕಳಸವಿದೆ ಎಂದು ಬಸ್ ನಲ್ಲಿದ್ದ ದಲಿತ ಮಹಿಳೆಯರನ್ನು ಕೆಳಗಿಳಿಸಿ ಅವಮಾನ ಮಾಡಿ ದೇವಾಲಯ ಪ್ರವೇಶ ನಿರ್ಬಂಧ ಮಾಡಲಾಗಿತ್ತು ಎನ್ನಲಾಗಿದೆ. ಈ ಕುರಿತು ಗ್ರಾಮದ ಮಹಿಳೆಯರು, ಯುವಕರು ದಲಿತ ಮುಖಂಡರ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ದೂರು ನೀಡುವ ಮೂಲಕ ದಲಿತರಿಗೆ ದೇವಾಲಯ ಪ್ರವೇಶಕ್ಕೆ ಮನವಿ ಮಾಡಲಾಗಿತ್ತು.
ಮಾ.3ರಂದು ಜಿಲ್ಲಾಡಳಿತದ ಸಮ್ಮುಖದಲ್ಲಿ ದಲಿತರ ದೇವಾಲಯ ಪ್ರವೇಶ ಮಾಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಯಾವುದೇ ವಿರೋಧಗಳು ವ್ಯಕ್ತವಾಗಲಿಲ್ಲ. ಇದು ದೇವಾಲಯ ಪ್ರವೇಶಕ್ಕಿಂತ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟದ ಫಲವಾಗಿದೆ ಎಂದು ದಲಿತ ಮುಖಂಡರು ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಲಕ್ಷ್ಮೇಗೌಡ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸತೀಶ್, ಸರ್ಕಲ್ ಇನ್ಸ್ಪೆಕ್ಟರ್, ಕಂದಾಯ ಇಲಾಖೆ ಅಧಿಕಾರಿಗಳು, ದುದ್ದ ಠಾಣೆ ಪಿಎಸ್ಸೈ ಅಭಿಜಿತ್, ಆರ್ಪಿಐ ರಾಜ್ಯಾಧ್ಯಕ್ಷ ಆರ್ಪಿಐ ಸತೀಶ್, ದಲಿತ ಮುಖಂಡರಾದ ಎಚ್.ಕೆ.ಸಂದೇಶ್, ಕೃಷ್ಣದಾಸ್, ಅಂಬುಗಮಲ್ಲೇಶ್, ಕೆ.ವೈ.ಜಗದೀಶ್, ಕೆ.ಪ್ರಕಾಶ್, ಸಾಂತೆನಹಳ್ಳಿ ರಮೇಶ್, ವೆಂಕಟೇಶ್ ಬ್ಯಾಕರವಳ್ಳಿ, ಚೇತನ್ ಶಾಂತಿಗ್ರಾಮ, ಜೈಭೀಮ್ ಬ್ರೀಗೆಡ್ ಅಧ್ಯಕ್ಷ ರಾಜೇಶ್, ರಂಜಿತ್, ಹರೀಶ್ ಕುಮಾರ್, ತೋಟೇಶ್ ನಿಟ್ಟೂರು, ಪ್ರಸನ್ನ, ಕೃಷ್ಣಮೂರ್ತಿ, ಕಬಳಿ ಸತೀಶ್, ಗ್ರಾಮಸ್ಥರಾದ ರಂಗಯ್ಯ, ನಾಗರಾಜು, ಸೇರಿದಂತೆ ಜಿಲ್ಲಾ ದಲಿತ ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು.
ಫೆ.29ರಂದು ಮಡೆನೂರು ಗ್ರಾಮದ ಮಹಿಳೆಯರಿಗೆ ಅಲ್ಲಿನ ಸವರ್ಣೀಯ ಮಹಿಳೆಯರು ಕಳಸ ಇರುವ ಬಸ್ ಗೆ ಹತ್ತದಂತೆ ನಿಷೇಧ ಹೇರಿ ಅವಮಾನ ಮಾಡಿದ್ದರು. ಈ ಕುರಿತು ಗ್ರಾಮಸ್ಥರು ಆರ್ಪಿಐ ರಾಜ್ಯಾಧ್ಯಕ್ಷ ಸತೀಶ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಹಾಸನ ಜಿಲ್ಲಾಡಳಿತಕ್ಕೆ ದೇವಾಲಯ ಪ್ರವೇಶ ಅನುಮತಿ ಕೇಳಿದ್ದರು. ಹೋರಾಟದ ಫಲವಾಗಿ ರವಿವಾರ ಜಿಲ್ಲಾಡಳಿತ ದಲಿತ ಮುಖಂಡರ ನೇತೃತ್ವದಲ್ಲಿ ಗ್ರಾಮಸ್ಥರು ಮಡೆನೂರಿನ ದೇವಾಲಯ ಪ್ರವೇಶ ಮಾಡಿದರು.