ನಾಳೆ ‘ಎತ್ತಿನಹೊಳೆ ಯೋಜನೆ ಕಾಮಗಾರಿ’ಗಳ ಉದ್ಘಾಟನಾ ಸಮಾರಂಭ

Update: 2024-09-05 15:34 GMT

ಬೆಂಗಳೂರು: ರಾಜ್ಯದ ಏಳು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲಿರುವ ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ’ಗೆ ನಾಳೆ(ಸೆ.6) ಮಧ್ಯಾಹ್ನ 12.05ಕ್ಕೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಯೋಜನೆ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಭೋಸರಾಜು ಸೇರಿ ಸರಕಾರದ ಸಚಿವರು ಉಪಸ್ಥಿತರಲಿದ್ದಾರೆ. ಶಾಸಕರಾದ ಶಿವಲಿಂಗೇಗೌಡ, ಸಿಮೆಂಟ್ ಮಂಜು, ಸಂಸದ ಶ್ರೇಯಸ್ ಪಟೇಲ್ ಸೇರಿ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಶಾಸಕರು ಭಾಗಿಯಾಗಲಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ, ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ (139 ದಿನಗಳು) 24.01 ಟಿ.ಎಂ.ಸಿ ಪ್ರಮಾಣದ ಪ್ರವಾಹದ ನೀರನ್ನು ರಾಜ್ಯದ 7 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6657 ಗ್ರಾಮಗಳಿಗೆ ಒದಗಿಸಲಾಗುತ್ತದೆ.

ಏಳು ಜಿಲ್ಲೆಗಳ ಸುಮಾರು 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14.056 ಟಿ.ಎಂ.ಸಿ ಕುಡಿಯುವ ನೀರನ್ನು, ಜಿಲ್ಲೆಗಳಲ್ಲಿರುವ 527 ಕೆರೆಗಳಿಗೆ 9.953 ಟಿ.ಎಂ.ಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ. 50ರಷ್ಟು ತುಂಬಿಸಿ ಅಂತರ್ಜಲ ಮರುಪೂರಣ ಮಾಡುವ 23,251.66 ಕೋಟಿ ರೂ.ಗಳ ಯೋಜನೆ ಇದಾಗಿದೆ.

2014ರಲ್ಲಿ ಆರಂಭಗೊಂಡ ಯೋಜನೆಯ ಮೊದಲನೇ ಹಂತದ ಏತ ಮತ್ತು ವಿದ್ಯುತ್ ಪೂರೈಕೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಬಹುದಿನಗಳಿಂದ ಉದ್ಭವಿಸಿದ್ದ ಅಡಚಣೆಗಳನ್ನು ನಿವಾರಿಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಪ್ರಸ್ತುತ ವಿಯರ್-1,2,4,5,6,7 ಮತ್ತು 8 ರಿಂದ ಒಟ್ಟಾರೆ 79.50 ಕ್ಯುಮೆಕ್ಸ್ (2800 ಕ್ಯೂಸೆಕ್ಸ್) ನೀರನ್ನು ಎತ್ತಿ ವಿತರಣಾ ತೊಟ್ಟಿ-3 ರವರೆಗೆ ಪೂರೈಸಿ ತದನಂತರ ವಿತರಣಾ ತೊಟ್ಟಿ-3 ರಿಂದ ನೀರನ್ನೆತ್ತಿ ವಿತರಣಾ ತೊಟ್ಟಿ-4 ರ ಮುಖಾಂತರ ಗುರುತ್ವ ಕಾಲುವೆಗೆ ನೀರನ್ನು ಹರಿಸಲು ಯೋಜಿಸಲಾಗಿದೆ.

ಗುರುತ್ವ ಕಾಲುವೆಯು ಒಟ್ಟು 252.61 ಕಿ.ಮೀ ಉದ್ದವಿದ್ದು, ಈ ಪೈಕಿ 164.47 ಕಿ.ಮೀ ಪೂರ್ಣಗೊಂಡಿದೆ. 25.87 ಕಿ.ಮೀ ಪ್ರಗತಿಯಲ್ಲಿರುತ್ತದೆ. ಗುರುತ್ವ ಕಾಲುವೆಯ ಸರಪಳಿ 0.00 ಕಿ.ಮೀ ಯಿಂದ ಸ:42.00 ಕಿ.ಮೀ ವರಗಿನ ಕಾಮಗಾರಿಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಂಡಿದೆ. ನಂತರದ ಕಾಮಗಾರಿಗಳು ಅರಣ್ಯ, ಭೂಸ್ವಾಧೀನ ಸಮಸ್ಯೆಯಿಂದಾಗಿ ಪೂರ್ಣಗೊಂಡಿರದ ಕಾರಣ, ಗುರುತ್ವ ಕಾಲುವೆಯ ಸರಪಳಿ 32.50 ಕಿ.ಮೀ. ನಲ್ಲಿರುವ ನಾಲಾ ಎಸ್ಕೇಪ್ ಮೂಲಕ ಸುಮಾರು 132.50 ಕಿ.ಮೀ ದೂರದಲ್ಲಿರುವ ಹಿರಿಯೂರಿನ ವಾಣಿ ವಿಲಾಸ ಸಾಗರಕ್ಕೆ ‘ವೇದಾ ವ್ಯಾಲಿ’ಯ ಮುಖಾಂತರ ತಾತ್ಕಾಲಿಕವಾಗಿ 1500 ಕ್ಯೂಸೆಕ್ಸ್ ನೀರನ್ನು ಹರಿಸಲು ಕಾರ್ಯಕ್ರಮ ರೂಪಿಸಲಾಗಿದೆ.

16,152 ಕೋಟಿ ರೂ.ಗಳ ಆರ್ಥಿಕ ಪ್ರಗತಿ: ಪ್ರಸಕ್ತ ವಿಯರ್-3 ಅನ್ನು ಹೊರತುಪಡಿಸಿ, ಉಳಿದ ಎಲ್ಲಾ ವಿಯರ್‌ಗಳಿಂದ ಸೆ.6ರಂದು ನೀರನ್ನು ಎತ್ತಿ ಗುರುತ್ವ ಕಾಲುವೆಗೆ ಪೂರೈಸಲು ಯೋಜಿಸಲಾಗಿದೆ.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗಾಗಿ ಜುಲೈ-2024ರ ಅಂತ್ಯದವರೆಗೆ ಒಟ್ಟಾರೆ 16,152 ಕೋಟಿ ರೂ.ಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದ್ದು, ಯೋಜನೆಯನ್ನು ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ.

2027ರ ಮಾರ್ಚ್ ಅಂತ್ಯಕ್ಕೆ ಯೋಜನೆ ಪೂರ್ಣ: 2025ರ ಮಾ.31ರ ಅಂತ್ಯಕ್ಕೆ ಎಲ್ಲ ಲಿಫ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ 85 ಕ್ಯುಸೆಕ್ಸ್ ನೀರನ್ನು ಮೇಲೆತ್ತಿ ಗುರುತ್ವ ಕಾಲುವೆ ಸರಪಳಿ 0.00 ಕಿ.ಮೀ ನಿಂದ 100.00 ಕಿ.ಮೀ ವರೆಗೆ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿನ ನಾಲೆಗೆ ಹರಿಸುವುದು ಹಾಗೂ ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸುವುದು.

2025ರ ನ.1ಕ್ಕೆ ಗುರುತ್ವ ಕಾಲುವೆ 100.00 ಕಿ.ಮೀ ನಿಂದ ಸ:261.69 ಕಿ.ಮೀ ವರೆಗೆ (ಪಾವಗಡ- ಮಧುಗಿರಿ ಫೀಡರ್ ಹಾಗೂ ಗೌರಿಬಿದನೂರು ಮತ್ತು ಟಿ.ಜಿ ಹಳ್ಳಿ-ರಾಮನಗರ ಫೀಡರ್ ಒಳಗೊಂಡಂತೆ) ನಾಲೆಗೆ ನೀರು ಹರಿಸುವುದು ಮತ್ತು ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ಶೇ.50 ರಷ್ಟು ಕಾಮಗಾರಿಯನ್ನು ಆರ್ ಅಂಡ್ ಆರ್ ಸಹಿತ 2026ರ ಮಾ.31ಕ್ಕೆ ಪೂರ್ಣಗೊಳಿಸುವುದು.

2026ರ ಸೆಪ್ಟೆಂಬರ್ ಅಂತ್ಯಕ್ಕೆ ಗುರುತ್ವ ಕಾಲುವೆ ಸರಪಳಿ 261.69 ಕಿ.ಮೀ. ನಂತರದ ಎಲ್ಲಾ ಫೀಡರ್ ಕಾಮಗಾರಿಗಳನ್ನು ಪೂರ್ಣಗೊಳಿಸಿ (ಲಿಫ್ಟ್ ಕಾಮಗಾರಿ ಒಳಗೊಂಡಂತೆ) ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವುದು ಹಾಗೂ ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ಬಾಕಿ ಶೇ.50ರಷ್ಟು ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದು.

ಒಟ್ಟಾರೆ ಎತ್ತಿನಹೊಳೆ ಯೋಜನೆಯನ್ನು 2026-27ನೆ ಸಾಲಿನಲ್ಲಿ 2027ರ ಮಾರ್ಚ್ ಅಂತ್ಯಕ್ಕೆ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News