ಗೊರೂರು | ಹೇಮಾವತಿ ಯೋಜನೆ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ, ಅಹೋರಾತ್ರಿ ಧರಣಿ
ಗೊರೂರು, ಅ.22: ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹೇಮಾವತಿ ಜಲಾಶಯ ಯೋಜನೆ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ನೀರು ಹರಿಸಿ, ಇಲ್ಲವಾದರೆ ಇಲ್ಲೇ ಮಲಗಿ ಹೋರಾಟ ಮಾಡುತ್ತೇನೆ. ಕಾನೂನು ವ್ಯವಸ್ಥೆಗೆ ಧಕ್ಕೆಯಾದರೆ ನೀವೇ ಹೊಣೆ. ಕೆರೆಕಟ್ಟೆಗಳನ್ನು ತುಂಬಿಸಿ ದನ ಕರುಗಳಿಗೆ ನೀರು ಬಿಡಿ ಎಂದು ಒತ್ತಾಯಿಸಿದರು.
ರೈತನ ಮನೆ ಹಾಳಾಗಿ ಹೋಗುತ್ತಿದೆ ಆದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದೆ, ಬೆಳೆಗಳು ಸಂಪೂರ್ಣವಾಗಿ ಒಣಗಿದ್ದು, ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ಕೆರೆಕಟ್ಟೆಗಳನ್ನು ತುಂಬಿಸಲು ನೀರು ಬಿಡುವಂತೆ ರೇವಣ್ಣ ಒತ್ತಾಯ ಮಾಡಿದರು.
ಧರಣಿಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.