ಹಾಸನ | ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಆಗ್ರಹಿಸಿ ತಮಟೆ ಚಳವಳಿ

Update: 2024-09-12 17:25 GMT

ಹಾಸನ: ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ದವಾದ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ತಮಟೆ ಚಳುವಳಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ತಮಟೆ ಚಳುವಳಿ ವೇಳೆ ಮಾತನಾಡಿದ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರಾದ ವಿ.ಆರ್.ಪ್ರಕಾಶ್ ಮಾತನಾಡಿ, "ಸುಪ್ರೀಂಕೋರ್ಟ್ ಒಳಮೀಸಲಾತಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಆಗಸ್ಟ್‌ನಲ್ಲಿ ಆದೇಶ ನೀಡಿದೆ. ಆದರೆ ತಿಂಗಳು ಕಳೆದರೂ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡಲು ತಡ ಮಾಡುತ್ತಿದೆ. ಒಳಮೀಸಲಾತಿ ಜಾರಿಗಾಗಿ ಕಳೆದ 30 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದು, ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಅಲ್ಲದೆ, ಇದು ಮೀಸಲಾತಿ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದೆ ಎಂದರು.

ಉಪ ಜಾತಿಗಳಿಗೆ ಒಳಮೀಸಲಾತಿ ನೀಡಿದರೆ ಸಮುದಾಯದ ಅಭಿವೃದ್ದಿ ಸಾಧ್ಯವಾಗುತ್ತದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಒಳಮೀಸಲಾತಿ ನೀಡುವುದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಆಗ್ರಹಿಸಿದ್ದರು. ಆದರೆ ಒಳಮೀಸಲಾತಿ ಕುರಿತು ಇದ್ದ ಗೊಂದಲಗಳಿಗೆ ಸುಪ್ರೀಂಕೋರ್ಟ್ ತೆರೆ ಎಳೆದು ಆದೇಶ ನೀಡಿದ್ದರೂ ಮುಖ್ಯಮಂತ್ರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಆದ್ದರಿಂದ ಸರ್ಕಾರವನ್ನು ಬಡಿದೆಬ್ಬಿಸಲು ತಮಟೆ ಚಳುವಳಿಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.

ಅರಸೀಕೆರೆ ತಾಲೂಕು ಸಂಚಾಲಕರಾದ ಬಾಣಾವರ ಮಹೇಶ್ ಮಾತನಾಡಿ, ದಶಕಗಳಿಂದ ಯಾವುದೇ ಸೌಲಭ್ಯ ಸರಿಯಾಗಿ ಸಿಗದೆ ವಂಚಿತರಾಗುತ್ತಿರುವ ನಮಗೆ ಒಳಮೀಸಲಾತಿ ಅನಿವಾರ್ಯವಿದೆ. ಒಳಮೀಸಲಾತಿಯನ್ನು ಸರ್ಕಾರ ಕಡ್ಡಾಯವಾಗಿ ಜಾರಿ ಮಾಡಬೇಕು. ಮೀಸಲಾತಿ ಜಾರಿಗಾಗಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ದೊಡ್ಡ ಮಟ್ಟದ ಹೋರಾಟ ಮಾಡಬೇಕಾದ ಅನಿವಾರ್ಯ ಬರುವಂತೆ ಸರ್ಕಾರ ಮಾಡಿಕೊಳ್ಳಬಾರದು. ಆದಷ್ಟು ಬೇಗನೆ ಒಳಮೀಸಲಾತಿ ವರ್ಗಿಕರಣ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ತಮಟೆ ಚಳುವಳಿ ವೇಳೆ, ಹಿರಿಯ ಮುಖಂಡರಾದ ಶಿವಮೂರ್ತಿ, ಕೃಷ್ಣ ದಾಸ್ , ಜಿಲ್ಲಾ ಸಂಘಟನಾ ಸಂಚಾಲಕರಾದ ದೇಶಾಣಿ ಶಂಕರಪ್ಪ, ಗೋವಿಂದರಾಜ್ ಹೊಸೂರು, ನಾಗವೇದಿ ಸಿದ್ದೇಶ, ಕೊಟ್ರೇಶ್ ನರಸೀಪುರ, ಪ್ರಭು ಅರೇಹಳ್ಳಿ, ಭಾಸ್ಕರ್, ನಾಗರಾಜ್ ಚಿಕ್ಕರಳ್ಳಿ, ನಂಜಪುರ ಆನಂದ್, ಗೂನ್ದಕಾನಳ್ಳಿ ರಾಜು, ಪುಟ್ಟರಾಜು, ರೇಣುಕಪ್ಪ, ನಿಡುಗಾರ ಹಳ್ಳಿ ಸಿದ್ದಪ್ಪ, ಪುಟ್ಟಸ್ವಾಮಯ್ಯ, ರಂಗಯ್ಯ, ಗವಿ ರಂಗಯ್ಯ, ನಾಗೇಶ್, ಮಂಜುನಾಥ್, ಆಲೂರು ಮಂಜಪ್ಪ, ಕೆ.ಪಿ.ಸ್ವಾಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News