ಹಾಸನ| ಮೇಕೆ ಮೇಯಿಸಲು ಹೋಗಿದ್ದ ವೃದ್ಧೆಯ ಅಭರಣ ದೋಚಿ ಹತ್ಯೆ: ಇಬ್ಬರು ಆರೋಪಿಗಳ ಬಂಧನ

Update: 2023-12-09 13:33 GMT

ಹಾಸನ: ಮೇಕೆಯನ್ನು ಮೇಯಿಸಲು ಹೋಗಿದ್ದ ವೃದ್ಧೆಯಿಂದ ಚಿನ್ನದ ಆಭರಣಗಳನ್ನು ಕಿತ್ತುಕೊಂಡು ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಚನ್ನರಾಯಪಟ್ಟಣ ನಗರ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ತಿಳಿಸಿದರು.

ನಗರದ ಎನ್.ಆರ್. ವೃತ್ತ ಬಳಿ ಇರುವ ನಗರ ಪೊಲೀಸ್ ಠಾಣೆಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಸುಶೀಲಮ್ಮ(65) ಮೃತ ಮಹಿಳೆಯಾಗಿದ್ದು,ಸುಶೀಲಮ್ಮ ಅವರು ಮೇಕೆಗಳ ಮೇಯಿಸಲು ಕೆರೆಕೋಡಿ ನಾಯಿಗುಂಡಿ ಹಳ್ಳದ ಬಳಿ ಹೋಗುತ್ತಿದ್ದರು. ಸಂಜೆ 6 ಗಂಟೆ ಸಮಯದಲ್ಲಿ ಮನೆಗೆ ಮೇಕೆಗಳು ಮಾತ್ರ ಬಂದಿದ್ದು, ಆದರೇ ಸುಶಿಲಮ್ಮ ಮನೆಗೆ ಬಂದಿರುವುದಿಲ್ಲ.

ಬಳಿಕ ಮನೆಯವರೆಲ್ಲರೂ ಸೇರಿ ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ. ಬೆಳಿಗ್ಗೆ ಸಮಯದಲ್ಲಿ ಗ್ರಾಮಸ್ಥರು ಹುಡುಕಾಟ ನಡೆಸಿದಾಗ ನಾಯಿಗುಂಡಿ ಹಳ್ಳದ ಹತ್ತಿರ ಹಳ್ಳದ ನೀರಿನಲ್ಲಿ ಹೆಂಗಸಿನ ಮೃತದೇಹ ತೇಲಾಡುತ್ತಿತ್ತು. ಮೃತದೇಹ ದಡಕ್ಕೆ ತಂದಾಗ ಆಕೆಯ ದೇಹದ ಮೇಲಿದ್ದ ಒಡವೆಗಳು ಇರಲಿಲ್ಲ. ಈ ಬಗ್ಗೆ ಮೃತ ಸುಶೀಲಮ್ಮ ಪುತ್ರ ಬಸವರಾಜಾಚಾರಿ ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಗಳಾದ ಚನ್ನರಾಯಪಟ್ಟಣ ತಾಲೂಕು ಕಸಬಾ ಹೋಬಳಿ ಅಡಗೂರು ಗ್ರಾಮದ ಕಾರ್ತಿಕ್ (20) ವರ್ಷ ಮತ್ತು ಸಾಗರ್ (20) ಎಂಬುವರನ್ನು ಬಂಧಿಸಿ ದೋಚಿದ್ದ ಒಡವೆಯನ್ನು ವಶಕ್ಕೆ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News