ಹಾಸನ: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಹಾಸನ: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಡಿಸಿ ಕಚೇರಿ ಎದುರು ಎಸ್ಎಫ್ಐ, ಡಿವೈಎಫ್ಐ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಂಜಿ ಪೃಥ್ವಿ ಮಾತನಾಡಿ. ಕಳೆದ 15-20 ವರ್ಷಗಳಿಂದ ಯಾವುದೆ ಸೌಲಭ್ಯಗಳಿಲ್ಲದೆ ಖಾಯಮಾತಿ ಇಲ್ಲದೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸ್ಥಿತಿ ದುಸ್ತರವಾಗಿದೆ.
ಅವರ ಖಾಯಮಾತಿ ಸೇರಿದಂತೆ ವೇತನ ಹೆಚ್ಚಳ ಮತ್ತು ಉದ್ಯೋಗ ಭದ್ರತೆಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದು, ಕಳೆದ ಹಲವು ಸರ್ಕಾರಗಳಿಗೆ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ನೀಡದೆ ಕೇವಲ ತಾತ್ಕಾಲಿಕ ಪರಿಹಾರ ನೀಡಿ ಸರ್ಕಾರಗಳು ಮುಖ್ಯವಾದ ಬೇಡಿಕೆಗಳನ್ನು ಮರೆಮಾಚುತ್ತಾ ಬಂದಿವೆ.
ಪ್ರಸ್ತುತ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಖಾಯಮಾತಿಗೆ ಕಾರ್ಯಯೋಜನೆ ರೂಪಿಸಲಾಗುವುದು ಎಂದು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಅಧಿಕಾರಕ್ಕೆ ಬಂದು 6 ತಿಂಗಳುಗಳು ಕಳೆದರು ಇಲ್ಲಿಯವರೆಗೆ ಯಾವುದೆ ತೀರ್ಮಾನ ಕೈಗೊಂಡಿಲ್ಲ.ಇದು ಅತಿಥಿ ಉಪನ್ಯಾಸಕರಿಗೆ ಮಾಡಿದ ದ್ರೋಹವಾಗಿರುತ್ತದೆ ಎಂದರು.
ಅದ್ದರಿಂದ ಕೂಡಲೆ ಇವರ ಬೇಡಿಕೆಗಳಾದ ಉದ್ಯೋಗದ ಭದ್ರತೆ, ವೇತನ ಹೆಚ್ಚಳ ಮತ್ತು ಅವರ ಸೇವೆಯನ್ನು ಖಾಯಂಗೊಳಿಸಬೇಕೆಂದು ಈ ಮೂಲಕ ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಸಂಘಟನೆಗಳು ಪ್ರಸ್ತುತ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದರು
ಪ್ರತಿಭಟನೆಯಲ್ಲಿ ಎಸ್ಎಫ್ಐ ಕಾರ್ಯದರ್ಶಿ ರಮೇಶ್, ಡಿವೈಎಫ್ಐ ಜಿಲ್ಲಾಧ್ಯಕ್ಷ ವಾಸುದೇವ್, ಶಶಿ, ವಿವೇಕ್, ಸ್ವರೂಪ್ ಇತರರು ಇದ್ದರು