ಹಾಸನ| ಕಾಡಾನೆ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ.
ಹಾಸನ: ಮಲೆನಾಡು ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆವೊಂದನ್ನು ಅರಣ್ಯ ಇಲಾಖೆ ಇಂದು ಸೆರೆ ಹಿಡಿದೆ.
ಇಂದು ಬೆಳಿಗ್ಗೆ 5 ಗಂಟೆಗೆ ಕಾಡಾನೆ ಇರುವ ಜಾಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದರು. ನಂತರ 10 ಗಂಟೆ ಸುಮಾರಿಗೆ ಕಾರ್ಯಾಚರಣೆ ಆರಂಭಿಸಲಾಯಿತು.
ಕಾಡಾನೆ ಕಂಡೊಡನೆ ಅರವಳಿಕೆ ಚುಚ್ಚು ಮದ್ದು ನೀಡಲಾಯಿತು. ಆದರೆ ಬಲಿಷ್ಠವಾದ ಕಾಡಾನೆ ಪ್ರಜ್ಞೆ ತಪ್ಪಿ ಬೀಳಲೇ ಇಲ್ಲ. ಇದಕ್ಕಾಗಿ ಸುಮಾರು 1 ಗಂಟೆ ಕಾಲ ಕಾಯಬೇಕಾಯಿತು. ಅಲ್ಲೀವರೆಗೂ ಸಲಗ ಮನಸೋ ಇಚ್ಛೆ ಓಡಾಡಿತು. ಅದಾದ ಬಳಿಕ ಕಾಫಿ ತೋಟದಲ್ಲಿ ಪ್ರಜ್ಞೆ ತಪ್ಪಿ ಬಿತ್ತು. ಕೂಡಲೇ ಅದನ್ನು ಸುತ್ತುವರಿದ ಎಂಟು ಸಾಕಾನೆಗಳು, ಮಾವುತರು ಹರ ಸಾಹಸ ಪಟ್ಟು ಸಲಗನನ್ನು ರಸ್ತೆಗೆ ಕರೆ ತಂದರು. ನಂತರ ಸೆರೆ ಹಿಡಿದ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿ ಕ್ರೇನ್ ಸಹಾಯದಿಂದ ಲಾರಿಗೆ ಹತ್ತಿಸಿ ಸ್ಥಳಾಂತರ ಮಾಡಲಾಯಿತು.
ಕಾರ್ಯಾಚರಣೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್, ಎಸಿಎಫ್ ಸೌರಭ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಪಶು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆಗೆ ಪಳಗಿದ ಆನೆ ಗಳಾದ ಅಭಿಮನ್ಯು, ಸುಗ್ರೀವ, ಧನಂಜಯ, ಪ್ರಶಾಂತ, ಭೀಮ, ಹರ್ಷ, ಅಶ್ವತ್ಥಾಮ ಮತ್ತು ಮಹೇಂದ್ರ ಎಂಬ ಸಾಕಾನೆಗಳು ಭಾಗಿಯಾಗಿದ್ದವು. ಇದರಿಂದಾಗಿ ಈವರೆಗೆ ಎರಡು ಪುಂಡಾನೆಗಳನ್ನು ಯಶಸ್ವಿಯಾಗಿ ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದ್ದು, ಇನ್ನೂ 7 ರಿಂದ 8 ಪುಂಡಾನೆ ಸೆರೆ ಹಿಡಿಯುವ ಯೋಜನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.