ಹೊಳೆನರಸೀಪುರ | ಜೀತದಾಳುಗಳಾಗಿ ದುಡಿಯುತ್ತಿದ್ದ ಒಡಿಸ್ಸಾದ ಕಾರ್ಮಿಕ ಕುಟುಂಬದ ರಕ್ಷಣೆ
ಹೊಳೆನರಸೀಪುರ : ಇಟ್ಟಿಗೆ ಕಾರ್ಖಾನೆಯಲ್ಲಿ ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದ ಅಂತರ್ ರಾಜ್ಯದ ಒಂದೇ ಕುಟುಂಬದ ನಾಲ್ವರನ್ನು ರಕ್ಷಣೆ ಮಾಡಿರುವುದು ಹೊಳೇನರಸೀಪುರದಲ್ಲಿ ವರದಿಯಾಗಿದೆ.
ತಾಲೂಕಿನ ಜೋಡಿಗುಬ್ಬಿ ಗ್ರಾಮದಲ್ಲಿರುವ ಎಸ್.ಎಂ. ಇಟ್ಟಿಗೆ ಕಾರ್ಖಾನೆಯಲ್ಲಿ ಒಡಿಸ್ಸಾ ಮೂಲದ ಜೀತ ಕಾರ್ಮಿಕರು ಕೆಲಸ ಮಾಡುತ್ತಿರುವ ಬಗ್ಗೆ ಎಕ್ಸ್‌ನಲ್ಲಿ ಸಂದೇಶ ಬಂದ ಹಿನ್ನೆಲೆ ಕೂಡಲೇ ಸ್ಥಳಕ್ಕೆ ಧಾವಿಸಿ ತನಿಖೆ ಮಾಡಿ ಕ್ರಮ ಜರುಗಿಸುವಂತೆ ಮೇಲಧಿಕಾರಿಗಳಿಂದ ತಹಶೀಲ್ದರ್‌ಗೆ ಸೂಚನೆ ಬಂದಿತ್ತು.
ತಹಶೀಲ್ದಾರ್ ಕೃಷ್ಣಮೂರ್ತಿ ಅವರು, ಹಳ್ಳಿಮೈಸೂರು ಪೊಲೀಸ್ ಠಾಣೆಗೆ ಭೇಟಿ ನೀಡಿ, ಮೇಲಾಧಿಕಾರಿಗಳ ಆದೇಶದಂತೆ ಜೋಡಿಗುಬ್ಬಿ ಗ್ರಾಮದ ಸರ್ವೇ ನಂಬರ್ 100ರ 1.06 ಎಕರೆ ಜಮೀನಿನಲ್ಲಿ ಸತೀಶ್ ಎಂಬವರು ನಡೆಸುತ್ತಿದ್ದ ಕಾರ್ಖಾನೆಗೆ ದಾಳಿ ನಡೆಸಿದ್ದಾರೆ. ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಓಡಿಸ್ಸಾ ಮೂಲದ ಪುಟೇಲ್, ಪತ್ನಿ ಉರ್ಮಿಳಾ ಪುಟೇಲ್, ಮಕ್ಕಳಾದ ವರ್ಷಿತಾ ಪುಟೇಲ್ ಹಾಗೂ ರಾಜ್ ಪುಟೇಲ್ ರನ್ನು ರಕ್ಷಣೆ ಮಾಡಲಾಗಿದೆ. ಇವರನ್ನು 3 ವರ್ಷಗಳಿಂದ ಕೆಲಸಕ್ಕೆ ಇರಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಪ್ರತಿದಿನ ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ಇವರನ್ನು ದುಡಿಸಿಕೊಳ್ಳಲಾಗುತ್ತಿತ್ತು. 17 ಸಾವಿರ ರೂ.ನೀಡಿ ದಿನಕ್ಕೆ 1000 ಇಟ್ಟಿಗೆ ಮಾಡಿದರೆ 800 ರೂ. ನೀಡುವುದಾಗಿ ಕರೆದುಕೊಂಡು ಬಂದು ದುಡಿಸಿಕೊಳ್ಳಲಾಗುತ್ತಿತ್ತು. ಆದರೆ ಆಗಿನಿಂದಲೂ ಇಟ್ಟಿಗೆ ತಯಾರಿಸಿದ ಹಣವನ್ನೂ ನೀಡದೆ ಕೆಲಸ ಮಾಡಿಸಿಕೊಳ್ಳುತಿದ್ದರು ಎನ್ನಲಾಗಿದೆ.
ಈ ಸಂಬಂಧ ಎಸ್.ಎಂ. ಇಟ್ಟಿಗೆ ಕಾರ್ಖಾನೆ ಮಾಲಕ ಸತೀಶ್ ಅವರ ವಿರುದ್ಧ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.