ನಾನಿನ್ನೂ ಬದುಕಿದ್ದೇನೆ, ಜೆಡಿಎಸ್ ಮುಗಿಸುವುದು ಅಷ್ಟು ಸುಲಭವಲ್ಲ: ಎಚ್.ಡಿ. ದೇವೇಗೌಡ
ಹಾಸನ: ಜೆಡಿಎಸ್ ಪಕ್ಷವನ್ನು ಮುಗಿಸಲು ಕಾಂಗ್ರೆಸ್ ನಾಯಕರು ಕರೆ ಕೊಟ್ಟಿದ್ದಾರೆ. ಆದರೆ ನಾನು ಇನ್ನೂ ಬದುಕಿದ್ದೇನೆ, ಜೆಡಿಎಸ್ ಮುಗಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿರುಗೇಟು ನೀಡಿದ್ದಾರೆ.
ತಾಲೂಕಿನ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ರವಿವಾರ ನಡೆದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಭಾಷಣವೊಂದರಲ್ಲಿ ಜೆಡಿಎಸ್ ಎಲ್ಲಿದೆ ಎಂದು ಅಧಿಕಾರದ ಅಹಂನಿಂದ ಮಾತನಾಡಿದ್ದಾರೆ. ಅವರ ಅಹಂಕಾರಕ್ಕೆ ಈ ಬಾರಿಯ ಚುನಾವಣೆಯಲ್ಲೆ ತಕ್ಕ ಉತ್ತರ ಜನತೆ ನೀಡಲಿದ್ದಾರೆ. ಕಾಂಗ್ರೆಸ್ ಎಲ್ಲಿದೆ ಎಂಬ ಪ್ರಶ್ನೆಯನ್ನು ನಾವು ಕೇಳ ಬೇಕಾಗುತ್ತದೆ. ಕರ್ನಾಟಕ ಸೇರಿ ಇನ್ನುಳಿದ ಎರಡು ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಪಕ್ಷವು ಜೆಡಿಎಸ್ ಅನ್ನು ಮುಗಿಸುವ ಮಾತು ಆಡುತ್ತಿದ್ದಾರೆ. ಇಡೀ ಬೆಂಗಳೂರಿನ ಆದಾಯವನ್ನು ಕೇವಲ ಒಬ್ಬ ಕಾಂಗ್ರೆಸ್ ನಾಯಕ ವಸೂಲಿ ಮಾಡುತ್ತಿದ್ದು, ರಾಜ್ಯದ ಜನರ ತೆರಿಗೆ ಹಣ ಹೊರ ರಾಜ್ಯದ ಪಾಲಾಗುತ್ತಿದೆ ಎಂದರು.
ಹಾಸನ ಜಿಲ್ಲೆಯಲ್ಲಿ ಏನು ಕೆಲಸ ಬಾಕಿ ಉಳಿದಿದೆ ಎಂಬುದು ಅವರಿಗೆ ಗೊತ್ತಿಲ್ಲ. ಅಷ್ಟು ಕೆಲಸವನ್ನು ಎಚ್.ಡಿ. ರೇವಣ್ಣ ಅವರು ಮಾಡಿದ್ದಾರೆ. ಯಾರಾದರೂ ಶ್ರವಣಬೆಳಗೊಳದಿಂದ ಮೊಸಳೆ ಹೊಸಳ್ಳಿ ಮಾರ್ಗವಾಗಿ ರೈಲ್ವೆ ಸಂಪರ್ಕ ಕಲ್ಪಿಸುವಂತೆ ಸಲಹೆ ನೀಡಿದರೆ ನಾಳೆ ರೈಲ್ವೆ ಸಚಿವರನ್ನು ಈ ಗಿರಾಕಿ ಬಿಡುವುದೇ ಇಲ್ಲ ಎಂದು ಎಚ್.ಡಿ. ರೇವಣ್ಣ ಅವರನ್ನು ಶ್ಲಾಘಿಸಿದರು. ಈಗಾಗಲೇ ಮೊಸಳೆ ಹೊಸಳ್ಳಿ ಹೋಬಳಿ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇದು ತಾಲೂಕು ಕೇಂದ್ರ ಆಗುವಲ್ಲಿ ಯಾವುದೇ ಸಂಶಯ ಇಲ್ಲ ಎಂದು ಭವಿಷ್ಯ ನುಡಿದರು.
ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಒಂದು ತಾಲೂಕು ಕೇಂದ್ರಕ್ಕೆ ಅಗತ್ಯ ಇರುವ ಎಲ್ಲಾ ಸೌಲಭ್ಯಗಳು ಹೋಬಳಿ ಕೇಂದ್ರವಾದ ಮೊಸಳೆ ಹೊಸಳ್ಳಿಯಲ್ಲಿದೆ. ಶಾಲಾ ಕಾಲೇಜುಗಳು, ಸಂಚಾರ ವ್ಯವಸ್ಥೆ, ಎಪಿಎಂಸಿ ಹೀಗೆ ಎಲ್ಲಾ ರೀತಿಯ ಸೌಲಭ್ಯಗಳು ಇಲ್ಲಿ ಲಭ್ಯವಿದೆ. 10 ವರ್ಷಗಳ ಹಿಂದೆ ಈ ರೀತಿಯ ಯಾವುದೇ ಸೌಲಭ್ಯ ಇರಲಿಲ್ಲ. ಇಂದು ತಾಲೂಕು ಮಟ್ಟದ ಸೌಲಭ್ಯ ಹೊಂದಿರುವ ಮೊಸಳೆ ಹೊಸಳ್ಳಿ ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರವಾಗಿ ಹೊರ ಹೊಮ್ಮಲಿದೆ. ಮೊಸಳೆ ಹೊಸಳ್ಳಿ ಭಾಗದಲ್ಲಿ ರೈತರ ಅಭಿವೃದ್ಧಿಗೆ ಬೆಳೆ ಸಾಲ, ಬೋರ್ವೆಲ್, ಟಿಸಿ ಜೊತೆಗೆ ಬೆಳೆಗಳ ಮಾರಾಟಕ್ಕೆ ಕೂಡ ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ, ಜೊತೆಗೆ ಎಸೆಸೆಲ್ಸಿ, ಪಿಯುಸಿ, ಪದವಿ, ಟೆಕ್ನಿಕಲ್ ಕೋರ್ಸ್ ಹೀಗೆ ಶಿಕ್ಷಣಕ್ಕೆ ಕೂಡ ಎಲ್ಲಾ ವ್ಯವಸ್ಥೆ ಲಭ್ಯ ಇದೆ. ಹಾಸನ ನಗರದಲ್ಲಿ ಕೈಗಾರಿಕೆ ಗಳನ್ನ ಸ್ಥಾಪಿಸಿ ಸುಮಾರು 70 ಸಾವಿರ ಜನ ಕೆಲಸ ಮಾಡುವ ಮೂಲಕ ಅನುಕೂಲ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲು ಈ ಬಾರಿ ದೇವೇಗೌಡರಿಗೆ ಮತ ನೀಡುತ್ತಿದ್ದೇವೆ ಎಂದು ಭಾವಿಸಿ ಪ್ರಜ್ವಲ್ ಗೆ ಮತ ನೀಡಬೇಕು ಎಂದು ಕೋರಿದರು.
ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಇದು ನನ್ನ ಚುನಾವಣೆ ಎಂದು ಭಾವಿಸಬೇಡಿ. ದೇವೇಗೌಡರಿಗೆ ಬೆಲೆ ಕೊಟ್ಟು ಮೋದಿ ಅವರು ಒಡಂಬಡಿಕೆ ಮಾಡಿಕೊಂಡು ಕೂರಿಸಿಕೊಂಡು ಮಾತನಾಡುವ ಮಟ್ಟಕ್ಕೆ ತಂದು ಕೊಟ್ಟಿರುವುದು ಇಲ್ಲಿನ ಜನರ ಆಶೀರ್ವಾದ. ನಾನು ಸಂಸದನಾದ ಮೇಲೆ ಏಳು ಕಂಪನಿಗಳು ಹಾಸನಕ್ಕೆ ಬಂದಿದೆ. ಈ ಕಂಪನಿಯಲ್ಲಿ ನೂರಕ್ಕೆ ಶೇಕಡ 85 ರಷ್ಟು ಸ್ಥಳೀಯ ಯುವಕರಿಗೆ ಕೆಲಸ ಕೊಡಬೇಕೆಂದು ಸೂಚಿಸಲಾಗಿದೆ ಎಂದರು. ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಇಲ್ಲೆ ಶಮನವಾಗಲಿ ಎಂದು ಕರೆ ನೀಡಿದರು.