ಕರ್ನಾಟಕಕ್ಕೆ ಅನ್ಯಾಯವಾದಾಗ ಸಂಸದ ಪ್ರಜ್ವಲ್ ರೇವಣ್ಣ, ದೇವೇಗೌಡ ಅವರು ಬಾಯಿ ಬಿಟ್ಟಿಲ್ಲ : ಸಿಎಂ ಸಿದ್ದರಾಮಯ್ಯ

Update: 2024-04-19 13:46 GMT

Photo: x/@siddaramaiah

ಹಾಸನ(ಸಕಲೇಶಪುರ) : ಜಂತರ್ ಮಂತರ್ ಬಳಿ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಪ್ರತಿಭಟನೆಯಾದಾಗ ಪ್ರಜ್ವಲ್ ರೇವಣ್ಣ, ದೇವೇಗೌಡ ಬಾಯಿ ಬಿಟ್ಟರೇ?. ಜನಗಳ ಪ್ರತಿನಿಧಿಯಾಗಿ ಲೊಕಸಭೆಯಲ್ಲಿ ಮಾತನಾಡದಿದ್ದರೆ ಅಲ್ಲಿಗೆ ಯಾಕೆ ಹೋಗಬೇಕು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಅವರು ಇಂದು ಹಾಸನ ಲೋಕಸಭಾ ಕ್ಷೇತ್ರದ ಸಕಲೇಶಪುರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪರವಾಗಿ ಪ್ರಜಾಧ್ವನಿ-02  ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು.

"ಪ್ರಜ್ವಲ್ ರೇವಣ್ಣ 5 ವರ್ಷ ಸಂಸದರಾಗಿ ಏನಾದರೂ ಮಾಡಿದ್ದಾರೆಯೇ?.  ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಪಾಲು ನೀಡದೆ ಅನ್ಯಾಯ ಮಾಡಿದಾಗಲೂ ಏನೂ ಮಾತನಾಡಲಿಲ್ಲ. ಕರ್ನಾಟಕದಿಂದ ಕೇಂದ್ರಕ್ಕೆ ಕೊಡುವ ತೆರಿಗೆ 4.30 ಲಕ್ಷ ಕೋಟಿ ರೂ.ಗಳು. ನಮಗೆ ವಾಪಸ್ಸು ಬರುವುದು 55 ಕೋಟಿ ರೂ.ಗಳು ಮಾತ್ರ. ಇದು ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದರು.

ಕೇಂದ್ರದ ಮಲತಾಯಿ ಧೋರಣೆ

ಬಿಜೆಪಿಯಿಂದ 25 ಜನ ಸಂಸದರಾಗಿದ್ದರು. ಈಗ 27 ಜನರಾಗಿದ್ದಾರೆ. ಇವರು ಯಾರು ಬಾಯಿ ಬಿಡಲಿಲ್ಲ. ನೀರಾವರಿ, ಬರಗಾಲಕ್ಕೆ ಹಣ ಬಿಡುಗಡೆ ಮಾಡಲಿಲ್ಲ. ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಕೊಟ್ಟು ಆರು ತಿಂಗಳಾದರೂ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ನರೇಂದ್ರ ಮೋದಿಯವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಬಂದಾಗ ಮಾತ್ರ. ಬರಗಾಲ, ಪ್ರವಾಹ ಬಂದಾಗ ಬರಲಿಲ್ಲ. ರಾಜ್ಯದ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಈ ಬಗ್ಗೆ ನಿಮಗೆ ಕೋಪ ಬಂದಿದ್ದರೆ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಲೋಕಸಭೆಗೆ ಕಳುಹಿಸುವ ತೀರ್ಮಾನ ಮಾಡಬೇಕು ಎಂದರು.

ನರೇಂದ್ರ ಮೋದಿಯವರು ಭ್ರಮಾಲೋಕವನ್ನೇ ಸೃಷ್ಟಿಸಿದರು

10 ವರ್ಷಗಳಲ್ಲಿ ನರೇಂದ್ರ ಮೋದಿಯವರು ರೈತರು ಬಡವರಿಗೆ ಯಾವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿಲ್ಲ ಹಾಗೂ ನುಡಿದಂತೆ ನಡೆದುಕೊಂಡಿಲ್ಲ. ಸಾಮಾಜಿಕವಾಗಿ ಹಿಂದುಳಿದವರಿಗೆ ಶಕ್ತಿ ತುಂಬುವ ಕೆಲಸವನ್ನೂ ಮಾಡಿಲ್ಲ ಎಂದರು.

ನರೇಂದ್ರ ಮೋದಿಯವರು ಭ್ರಮಾಲೋಕವನ್ನೇ ಸೃಷ್ಟಿಸಿದರು. 15 ಲಕ್ಷ ರೂ.ಗಳನ್ನು ಪ್ರತಿಯೊಬ್ಬರಿಗೆ ಹಾಕಿಲ್ಲ. ಯಾಕೆ ಕೊಡಲಾಗಿಲ್ಲ ಎಂಬ ಬಗ್ಗೆ ಮಾತನಾಡಿಲ್ಲ. ಈ ಬಾರಿ ಬಿಜೆಪಿಯೊದಿಗೆ ಜೆಡಿಎಸ್ ನವರೂ ಸೇರಿಕೊಂಡಿದ್ದಾರೆ. ವಾಚಾಮಗೋಚರವಾಗಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿದ್ದ ದೇವೇಗೌಡರು ಈಗ ಅವಿನಾಭಾವ ಸಂಬಂಧವಿದೆ ಎನ್ನುತ್ತಿದ್ದಾರೆ. ಈ ಅನಿರೀಕ್ಷಿತ ಪ್ರೀತಿಯ ಬಗ್ಗೆ ಜನ ವಿಚಾರ ಮಾಡಬೇಕು. ಸ್ವಾರ್ಥಕ್ಕಾಗಿ, ಕುಟುಂಬ ರಾಜಕಾರಣಕ್ಕಾಗಿ ಈಗ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿದ್ದಾರೆ. ಬಡವರ ಕಷ್ಟ ಸುಖ, ಸಾಮಾನ್ಯ ಜನರ, ರೈತರಿಗಾಗಿ ಸೇರಿಲ್ಲ. ಕೇವಲ ಸ್ವಾರ್ಥಕ್ಕಾಗಿ ಸೇರಿಕೊಂಡಿದ್ದಾರೆ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News