ಲೋಕಸಭಾ ಚುನಾವಣೆ | ಹಾಸನದಲ್ಲಿ 9.5 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿ
ಹಾಸನ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ 9.5 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದು ವರದಿಯಾಗಿದೆ.
ಹಾಸನ ಹೊರವಲಯ ಕೈಗಾರಿಕಾ ಪ್ರದೇಶದಲ್ಲಿರುವ ವುಡ್‌ಪೆಕರ್ ಡಿಸ್ಟಿಲರಿಸ್ ಅಂಡ್ ಬ್ರಿವರೀಸ್ ಪ್ರೇವೇಟ್ ಲಿ., (ಬ್ರಿವರಿ ವಿಭಾಗ) ಇಲ್ಲಿ ತಪಾಸಣೆ ನಡೆಸಿ, ನ್ಯೂನ್ಯತೆ ಕಂಡುಬಂದ ಹಿನ್ನಲೆ 9,54,08,422 ಕೋಟಿ ರೂ. ಮೌಲ್ಯದ ಒಟ್ಟು 56,236 ಬಾಕ್ಸ್‌ಗಳಲ್ಲಿದ್ದ (5,63,756.88 ಲೀಟರ್) ಬ್ರ್ಯಾಂಡ್ ಬಿಯರ್‌ಗಳನ್ನು ಜಪ್ತಿ ಮಾಡಿ, ಡಿಸ್ಟಿಲರಿ ಸನ್ನದುದಾರರು ವಿರುದ್ಧ ಸಾಮಾನ್ಯ ಮೊಕದ್ದಮೆಯನ್ನು (ಬಿಎಲ್‌ಸಿ) ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾ.16 ರಿಂದ ಏ.6 ರವರೆಗೆ ಜಿಲ್ಲೆಯ ವಿವಿಧೆಡೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಒಟ್ಟು 944 ಪ್ರಕರಣಗಳು ದಾಖಲು ಮಾಡಿಕೊಂಡಿದ್ದಾರೆ. ಇದರಲ್ಲಿ 3,488.185 ಲೀಟರ್ ಮದ್ಯ, 5,64,362 ಲೀಟರ್ ಬಿಯರ್, 34.000 ಲೀಟರ್ ವೈನ್, 14.000 ಲೀಟರ್ ಸೇಂದಿ ವಶಪಡಿಸಿಕೊಂಡಿದ್ದಾರೆ. 51 ವಿವಿಧ ರೀತಿಯ ವಾಹನಗಳನ್ನು ಜಪ್ತಿ ಮಾಡಿ 970 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.