ಹಾಸನ : ದ್ವಿತೀಯ ಪಿಯುಸಿ ವಿದ್ಯಾರ್ಥಿ ಹಾಸ್ಟೇಲ್ ನಲ್ಲಿ ಅನುಮಾನಾಸ್ಪದ ಸಾವು
ಹಾಸನ : ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ಕಾಲೇಜಿನ ಹಾಸ್ಟೇಲ್ ನಲ್ಲಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದು, ಮೃತ ವಿದ್ಯಾರ್ಥಿಯ ಕುಟುಂಬಸ್ಥರು ಕಾಲೇಜು ಆಡಳಿತ ಮಂಡಳಿ, ವಾರ್ಡನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಹಾಸ್ಟೆಲ್ ಒಳಗೆ ಇದ್ದ ಕೆಲ ಪೀಠೋಪಕರಣವನ್ನು ಒಡೆದು ಹಾಕಿದ ಘಟನೆ ನಡೆದಿರುವುದು ವರದಿಯಾಗಿದೆ.
ಪ್ರತಿಷ್ಠಿತ ಖಾಸಗಿ ಕಾಲೇಜು ಅಧೀನದ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದ ಸಾವು ಪ್ರಕರಣ ಕುರಿತಂತೆ ಹಾಸ್ಟೆಲ್ ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕುಟುಂಬದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಆಡಳಿತ ಮಂಡಳಿಯ ಪ್ರಮುಖರು ಬರುವವರೆಗೆ ಮೃತದೇಹ ತೆಗೆಯಲು ಬಿಡುವುದಿಲ್ಲ ಎಂದು ಮೃತ ವಿದ್ಯಾರ್ಥಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಜೊತೆಗೂ ವಾಗ್ವಾದವನ್ನು ಸಂಬಂಧಿಕರು ನಡೆಸಿದರು. ಘಟನೆ ನಡೆದು ಮೂರು ಗಂಟೆಯಾದರೂ ಇನ್ನೂ ಬಂದಿಲ್ಲ ಎಂದು ಕಿಡಿಕಾರಿದ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಪರಿಸ್ಥಿತಿ ನಿಭಾಯಿಸಲು ಪೊಲೀಸರ ಹರಸಾಹಸಪಟ್ಟರು.
ಮೃತ ವಿಕಾಸ್ ನೇಣು ಬಿಗಿದ ಜಾಗದಲ್ಲಿ ಆತನ ಕಾಲು ನೆಲಕ್ಕೆ ಊರಿತ್ತು. ತುಂಬ ಉದ್ದವಾದ ಹಗ್ಗ ನೆಲದಲ್ಲಿ ಇತ್ತು. ಆತನ ಎತ್ತರದಷ್ಟು ನೆಲ ಇರುವುದು ಕೆಲ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಮೃತನ ಸಂಬಂಧಿಕರು ದೂರಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅದಿಕಾರಿಗಳ ಭೇಟಿ ನೀಡಿದಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರ ನಿಯೋಜನೆ ಮಾಡಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.