ಬಿಜೆಪಿಯವರು ಕೇಂದ್ರದ ಅನ್ಯಾಯವನ್ನು ಸಮರ್ಥಿಸಿಕೊಂಡು ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ
ಹಾಸನ : ಬಿಜೆಪಿಯವರು ಕೇಂದ್ರ ಸರಕಾರದ ಅನ್ಯಾಯವನ್ನು ಸಮರ್ಥನೆ ಮಾಡಿಕೊಂಡು ಪಕ್ಷ ರಾಜಕಾರಣಕ್ಕಾಗಿ ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದರೊಂದಿಗೆ ಮಾತನಾಡಿದರು.
ಕೇಂದ್ರ ಸರಕಾರದ ತೆರಿಗೆ ಹಂಚಿಕೆಯಲ್ಲಿ ಆಂಧ್ರ ಪ್ರದೇಶ, ತಮಿಳುನಾಡಿಗೆ ತೊಂದರೆ ಇಲ್ಲ. ನಮ್ಮ ಸರಕಾರಕ್ಕೆ ಮಾತ್ರ ಯಾಕೆ ತೊಂದರೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಅವರು, "ಕೇರಳದವರು ಯಾಕೆ ದಿಲ್ಲಿಗೆ ಬಂದು ಪ್ರತಿಭಟಿಸಿದರು ಅದಕ್ಕೆ ತಮಿಳುನಾಡಿನವರು ಏಕೆ ಬೆಂಬಲ ನೀಡಿದರು. ಎಲ್ಲಾ ರಾಜ್ಯಗಳಿಗೂ ಅನ್ಯಾಯವಾಗಿದೆ. ದಕ್ಷಿಣ ರಾಜ್ಯಗಳಿಗೆ ಜಾಸ್ತಿ ಅನ್ಯಾಯವಾಗಿದೆ. ಉತ್ತರದ ರಾಜ್ಯಗಳಿಗೆ ಕೊಡಬೇಡಿ ಎನ್ನುವುದಿಲ್ಲ. ಆದರೆ ನಮಗೆ ಅನ್ಯಾಯ ಮಾಡಬೇಡಿ. ಕೇಂದ್ರದ ಪಾಲಿನಲ್ಲಿಯೇ ಕೊಡಲಿ. ನಮ್ಮ ಪಾಲಿನಿಂದ ಯಾಕೆ ಕಿತ್ತು ಕೊಡುತ್ತಾರೆ?" ಎಂದು ಪ್ರಶ್ನಿದರು.
ಉದ್ದೇಶಪೂರ್ವಕವಾಗಿ ಅಪಪ್ರಚಾರ
ವಿಧಾನ ಪರಿಷತ್ ನಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಮಸೂದೆಗೆ ಸೋಲುಂಟಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಆದಾಯ ಹೆಚ್ಚಿರುವ ದೇವಸ್ಥಾನಗಳಿಂದ ಕಡಿಮೆ ಆದಾಯವಿರುವ ಹಿಂದೂ ದೇವಾಲಯಗಳಿಗೆ ಬಳಸುವುದನ್ನು ವಿರೋಧಿಸುತ್ತಾರೆ. ಬೇರೆ ಯಾವ ಧರ್ಮದ ದೇವಾಲಯಗಳಿಗೂ ಇದನ್ನು ಬಳಸುವುದಿಲ್ಲ. ಅವರಿಗೆ ಪರಿಷತ್ತಿನಲ್ಲಿ ಬಹುಮತ ಇದೆ ಎಂದು ಹೀಗೆ ಮಾಡಿದ್ದಾರೆ ಎಂದರು.
ಸಂವಿಧಾನ ಕಿತ್ತೊಗೆಯಿರಿ ಎನ್ನುವವರನ್ನೇ ಕಿತ್ತೊಗೆಯಿರಿ
ಸರಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ, ರಾಜ್ಯವನ್ನು ಲೂಟಿ ಮಾಡಿ ಚುನಾವಣೆ ನಡೆಸಲು ಹೊರಟಿದ್ದಾರೆ ಎಂದಿರುವ ಅನಂತ್ ಕುಮಾರ್ ಹೆಗಡೆ ಬಗ್ಗೆ ಮಾತನಾಡಿ, ಅನಂತ್ ಕುಮಾರ್ ಹೆಗಡೆ ನಾವು ಅಧಿಕಾರಕ್ಕೆ ಬಂದಿರುವುದೇ ಈ ಸಂವಿಧಾನ ಬದಲಾಯಿಸಲು ಎಂದವರು. ಅವರು ಲೋಕಸಭಾ ಸದಸ್ಯರಾಗಲು ಲಾಯಕ್ಕೇ? ಎಂದು ಪ್ರಶ್ನಿಸಿದರು. ಅಂಥವರು ಹೇಳಿಕೆ ನೀಡಿದರೆ ಯಾವ ಕಿಮ್ಮತ್ತು ಇರುತ್ತದೆ . ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಸಂಸತ್ತು ಮತ್ತು ನ್ಯಾಯಾಲಯಗಳಿಗೆ ಜನರೇ ಮಾಲೀಕರು. ಸಂವಿಧಾನ ಕಿತ್ತೊಗೆಯಿರಿ ಎನ್ನುವವರನ್ನೇ ಕಿತ್ತೊಗೆಯಿರಿ ಎಂದು ಹೇಳಿದ್ದರು ಎಂದರು.