ಹೊಳೆನರಸೀಪುರ | ದೇವಸ್ಥಾನದಲ್ಲಿ ಜಾರಿ ಬಿದ್ದ ಎಚ್.ಡಿ.ರೇವಣ್ಣ, ಆಸ್ಪತ್ರೆಗೆ ದಾಖಲು
Update: 2024-07-17 18:34 GMT
ಹೊಳೆನರಸೀಪುರ : ಮಾಜಿ ಸಚಿವ ಹಾಗೂ ಹಾಲಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರು ಬುಧವಾರ ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದು ಪಕ್ಕೆಲುಬಿಗೆ ಗಾಯ ಮಾಡಿಕೊಂಡಿದ್ದಾರೆ.
ಕೂಡಲೇ ಅವರನ್ನು ತಾಲೂಕು ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಯಿತು. ಬಳಿಕ ಅವರು ತುರ್ತು ಚಿಕಿತ್ಸೆ ಪಡೆದು ವಿಶ್ರಾಂತಿಗಾಗಿ ಬೆಂಗಳೂರಿಗೆ ತೆರಳಿದರು.
ಏಕಾದಶಿ ಪ್ರಯುಕ್ತ ಬುಧವಾರ ತಮ್ಮ ಕುಟುಂಬದ ಕುಲ ದೇವರು ತಾಲ್ಲೂಕಿನ ಹರದನಹಳ್ಳಿ ದೇವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲು ರೇವಣ್ಣ ತೆರಳಿದ್ದರು. ಬಳಿಕ ಅಲ್ಲಿಂದ ಪೂಜೆ ಸಲ್ಲಿಸಿ ಹೊಳೆನರಸೀಪುರದ ಲಕ್ಷ್ಮೀನರಸಿಂಹ ದೇವಾಲಯಕ್ಕೆ ತೆರಳಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಪಕ್ಕೆಲುಬಿಗೆ ಪೆಟ್ಟು ಬಿದ್ದಿದೆ. ಕೂಡಲೇ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.