ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ: ಸಿಎಂ ಸಿದ್ದರಾಮಯ್ಯ

Update: 2024-03-01 09:18 GMT

ಹಾಸನ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ತಕ್ಷಣದಲ್ಲಿ ಮಾಡಲಾಗುವುದು. ಎಲ್ಲರೂ ಒಗ್ಗಟ್ಟಾಗಿರುವುದರಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲವಿರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಪಾಕಿಸ್ತಾನ ಪರ ಘೋಷಣೆ ಪ್ರಕರಣ ಸಂಬಂಧಿಸಿದಂತೆ ಎಫ್ ಎಸ್ ಎಲ್ ವರದಿ ಬೇಗ ಬಹಿರಂಗಪಡಿಸಬೇಕು ಎಂದು ವಿಪಕ್ಷ ನಾಯಕ ಅಶೋಕ್ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಎಫ್.ಎಸ್.ಎಲ್ ವರದಿ ಬಂದ ತಕ್ಷಣ ಬಹಿರಂಗ ಮಾಡುತ್ತೇವೆ. ಭಾರತದ ಪರವಾಗಿ ಇಲ್ಲದಿರುವವರು ಘೋಷಣೆ ಕೂಗಿದ್ದು, ನಿಜವಾಗಿದ್ದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ದೇಶಭಕ್ತಿಯನ್ನು ಬಿಜೆಪಿಯವರು ಕಾಂಗ್ರೆಸ್ ಗೆ ಹೇಳಿಕೊಡುವ ಅಗತ್ಯವಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ ಎಂದರು.

ಜಾತಿಗಣತಿ ವರದಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ

ಕಾಂತರಾಜು ವರದಿಯನ್ನು ಕೆಲವು ಸ್ವಾಮೀಜಿಗಳು ಹಾಗೂ ಪಕ್ಷದ ಕೆಲ ನಾಯಕರೇ ವಿರೋಧಿಸುತ್ತಿರುವ ಬಗ್ಗೆ ಉತ್ತರಿಸಿ, ಜಾತಿಗಣತಿ ವರದಿಯನ್ನು ಸ್ವೀಕರಿಸಲಾಗಿದೆ. ಆದರೆ ವರದಿಯಲ್ಲಿರುವ ಅಂಶಗಳ ಬಗ್ಗೆ ಮಾಹಿತಿಯಿಲ್ಲ. ಸದರಿ ವರದಿಯನ್ನು ಸಚಿವ ಸಂಪುಟದ ಮುಂದೆ ಇರಿಸಿ ಚರ್ಚಿಸಲಾಗುವುದು ಎಂದರು. 

ಜಾತ್ಯಾತೀತ ಜೆಡಿಎಸ್ ಕೋಮುವಾದಿ ಪಕ್ಷದೊಂದಿಗೆ ಮೈತ್ರಿ

ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯವರು ಒಬ್ಬರು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ , ಮತ್ತೊಬ್ಬರು ಗೈರಾಗಿದ್ದರು. ಇದನ್ನು ಮುಚ್ಚಿಹಾಕಲು ಈ ರೀತಿ ಮಾಡುತ್ತಿದ್ದಾರೆ. ಪಕ್ಷವು ಮಾಡಿಕೊಂಡಿರುವ ಮೈತ್ರಿಯನ್ನು ಶಾಸಕರೇ ಒಪ್ಪಿರುವುದಿಲ್ಲ. ಜೆಡಿಎಸ್ ಅವರು ಜಾತ್ಯಾತೀತರಾಗಿದ್ದು, ಕೋಮುವಾದಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದರು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News