ಹಿಂಡೆನ್ ಬರ್ಗ್ ಆರೋಪ | ನನ್ನ ಪತಿಯ ಗೆಳೆಯರ ಫಂಡ್ ನಲ್ಲಿ ಹೂಡಿಕೆ ಮಾಡಲಾಗಿದೆ : ಮಾಧಬಿ ಪುರಿ ಬುಚ್ ಸ್ಪಷ್ಟನೆ
ಹೊಸದಿಲ್ಲಿ: ನನ್ನ ಪತಿಯ ಗೆಳೆಯ, ಮುಖ್ಯ ಹೂಡಿಕೆ ಅಧಿಕಾರಿ ಅನಿಲ್ ಅಹುಜಾ ಅವರ ಫಂಡ್ ನಲ್ಲಿ ಹೂಡಿಕೆ ಮಾಡಲಾಗಿದ್ದು, ಅವರು ಧಾವಲ್ ಶಾಲೆ ಹಾಗೂ ಐಐಟಿ ದಿಲ್ಲಿಯ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಹಪಾಠಿಯಾಗಿದ್ದಾರೆ ಎಂದು ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಹಿಂಡೆನ್ ಬರ್ಗ್ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಅಮೆರಿಕಾದ ಕಿರು ಅವಧಿಯ ಮಾರಾಟ ಸಂಸ್ಥೆ ಹಿಂಡೆನ್ ಬರ್ಗ್ ರಿಸರ್ಚ್ ಮಾಡಿರುವ ಆರೋಪಗಳಿಗೆ ಹಂತಹಂತವಾಗಿ ಪ್ರತ್ಯುತ್ತರ ನೀಡಿರುವ ಮಾಧಬಿ ಪುರಿ ಬುಚ್, 2010ರಿಂದ 2019ರವರೆಗೆ ಧಾವಲ್ ಸಿಂಗಪುರ ಮತ್ತು ಲಂಡನ್ ನಲ್ಲಿ ವಾಸಿಸಿದ್ದರು ಹಾಗೂ ಯೂನಿಲಿವರ್ ನೊಂದಿಗೆ ಕೆಲಸ ಮಾಡಿದ್ದರು. ನಾನೂ ಕೂಡಾ 2011ರಿಂದ ಮಾರ್ಚ್ 2017ರವರೆಗೆ ಈಕ್ವಿಟಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದೆ ಹಾಗೂ ನಂತರ ಸಲಹೆಗಾರಳಾಗಿದ್ದೆ. ಹಿಂಡೆನ್ ಬರ್ಗ್ ವರದಿಯಲ್ಲಿ ಉಲ್ಲೇಖಿಸಲಾಗಿರುವ ಹೂಡಿಕೆಯನ್ನು ನಾನು ಹಾಗೂ ನನ್ನ ಪತಿ 2015ರಲ್ಲಿ ಮಾಡಿದ್ದು, ಆಗ ನಾವು ಸಿಂಗಪುರದಲ್ಲಿ ವಾಸಿಸುತ್ತಿದ್ದ ಖಾಸಗಿ ಪ್ರಜೆಗಳಾಗಿದ್ದೆವು. ಇದಾದ ಎರಡು ವರ್ಷಗಳ ನಂತರ ನಾನು (ಮಾಧಬಿ ಪುರಿ ಬುಚ್) ಸೆಬಿಯನ್ನು ಸೇರ್ಪಡೆಯಾದೆ ಎಂದು ಮಾಧಬಿ ಪುರಿ ಬುಚ್ ಅವರು ತಮ್ಮ ಪತಿ ಧಾವಲ್ ಬುಚ್ ರೊಂದಿಗೆ ಸ್ಪಷ್ಟನೆ ನೀಡಿದ್ದಾರೆ.
ಮಾಧಬಿ ಪುರಿ ಬುಚ್ ಹಾಗೂ ಧಾವಲ್ ಬುಚ್ ಅವರ ಹೂಡಿಕೆಯ ನಿರ್ಧಾರದಲ್ಲಿ ಸಿಟಿ ಬ್ಯಾಂಕ್, ಜೆ.ಪಿ.ಮೋರ್ಗನ್ ಹಾಗೂ 3ಐ ಗ್ರೂಪ್ ಪಿಎಲ್ಸಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದ ಹಾಗೂ ಬಲವಾದ ಹೂಡಿಕೆ ಹಿನ್ನೆಲೆಯನ್ನು ಹೊಂದಿದ್ದ ಅನಿಲ್ ಅಹುಜಾ ಮುಖ್ಯ ಪಾತ್ರ ವಹಿಸಿದ್ದರು ಎನ್ನಲಾಗಿದೆ. “2018ರಲ್ಲಿ ಅಹುಜಾ ಅವರು ಆ ನಿಧಿಯ ಸಿಐಒ ಹುದ್ದೆಯನ್ನು ತೊರೆದ ನಂತರ, ನಾವು ಆ ನಿಧಿಯಿಂದ ನಮ್ಮ ಹೂಡಿಕೆಯನ್ನು ನಗದೀಕರಿಸಿಕೊಂಡಿದ್ದೆವು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಹುಜಾರ ದೃಢೀಕರಣದೊಂದಿಗೆ ಯಾವುದೇ ಹಂತದಲ್ಲೂ ಅದಾನಿ ಗ್ರೂಪ್ ಕಂಪನಿಯ ಯಾವುದೇ ಬಾಂಡ್ ಗಳು, ಈಕ್ವಿಟಿಗಳು ಉತ್ಪನ್ನಗಳಲ್ಲಿ ನಿಧಿ ಹೂಡಿಕೆ ಮಾಡಿಲ್ಲ ಎಂದು ಅವರು ದೃಢಪಡಿಸಿದ್ದಾರೆ.