ಶ್ರೀಮಂತ ದೇಶಗಳ ಪೌರತ್ವ ಪಡೆಯುವಲ್ಲಿ ಭಾರತ ಮೊದಲ ಸ್ಥಾನ

Update: 2023-10-24 02:31 GMT

ಹೊಸದಿಲ್ಲಿ: ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಸಂಘರ್ಷ ಮುಂದುವರಿದಿರಬಹುದು. ಆದರೆ ವಲಸೆ ವಿಚಾರಕ್ಕೆ ಬಂದರೆ ಉಭಯ ದೇಶಗಳ ಜುಗಲ್ಬಂದಿ ಕಂಡುಬರುತ್ತದೆ. ಓಇಸಿಡಿ ದೇಶಗಳಿಗೆ ವಲಸೆ ಹೋದವರ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಿಯಾಗಿದ್ದರೆ, ವಿದೇಶಿ ಪೌರತ್ವ ಪಡೆಯುವಲ್ಲಿ ಕೂಡಾ ಭಾರತ ಮೊದಲ ಸ್ಥಾನದಲ್ಲಿದೆ. ವಿದೇಶಿಯರಿಗೆ ಪೌರತ್ವ ಮಂಜೂರು ಮಾಡುವಲ್ಲಿ ಕೆನಡಾ ಗರಿಷ್ಠ ಪ್ರಗತಿಯನ್ನು ಕಂಡಿದೆ.

ಪ್ಯಾರಿಸ್ ನಲ್ಲಿ ಬಿಡುಗಡೆ ಮಾಡಲಾದ ಇಂಟರ್ನ್ಯಾಷನಲ್ ಮೈಗ್ರೇಶನ್ ಔಟ್ ಲುಕ್ ಎಂಬ ಓಇಸಿಡಿ ವರದಿ-2023ರ ಪ್ರಕಾರ, ಶ್ರೀಮಂತ ದೇಶಗಳ ಪೌರತ್ವ ಪಡೆಯುವಲ್ಲಿ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ಅಂತೆಯೇ ವಿದೇಶಿಯರಿಗೆ ಪೌರತ್ವ ನೀಡುವಲ್ಲಿ ಕೆನಡಾದಲ್ಲಿ ಗರಿಷ್ಠ ಹೆಚ್ಚಳ ಕಂಡುಬಂದಿದೆ. 2021ಕ್ಕೆ ಹೋಲಿಸಿದರೆ 2022ರಲ್ಲಿ ಈ ಪ್ರಮಾಣ ಶೇಕಡ 174ರಷ್ಟು ಹೆಚ್ಚಿದೆ.

ಕಳೆದ ವರ್ಷ ಓಇಸಿಡಿ ದೇಶಗಳ ಪೌರತ್ವ ಪಡೆಯುವಲ್ಲಿ ಗರಿಷ್ಠ ಹೆಚ್ಚಳ ಕಂಡುಬಂದಿದೆ. 2021ಕ್ಕೆ ಹೋಲಿಸಿದರೆ ಶೇಕಡ 25ರಷ್ಟು ಪ್ರಗತಿ ಕಂಡುಬಂದಿದೆ. ಆದರೆ ಯಾವ ದೇಶಗಳಿಂದ ಗರಿಷ್ಠ ಹೆಚ್ಚಳವಾಗಿದೆ ಎಂಬ ಅಂಕಿ ಅಂಶವನ್ನು ವರದಿ ಬಹಿರಂಗಪಡಿಸಿಲ್ಲ. ಆದರೆ 2019ರಿಂದೀಚೆಗೆ ಓಇಸಿಡಿ ದೇಶಗಳ ಪೌರತ್ವ ಪಡೆಯುವಲ್ಲಿ ಭಾರತೀಯರು ಮುಂಚೂಣಿಯಲ್ಲಿದ್ದಾರೆ ಎಂದು ವರದಿ ಸ್ಪಷ್ಟಪಡಿಸಿದೆ.

2021ರಲ್ಲಿ 1.3 ಲಕ್ಷ ಭಾರತೀಯರು ಓಇಸಿಡಿ ದೇಶಗಳ ಪೌರತ್ವ ಪಡೆದಿದ್ದಾರೆ. 2019ರಲ್ಲಿ ಈ ಪ್ರಮಾಣ 1.5 ಲಕ್ಷ ಆಗಿತ್ತು. 2021ರಲ್ಲಿ ಚೀನಾದ 57 ಸಾವಿರ ಮಂದಿ ಓಇಸಿಡಿ ದೇಶಗಳ ಪೌರತ್ವ ಪಡೆದಿದ್ದು, ರೇಸ್ ನಲ್ಲಿ ಈ ದೇಶ ಐದನೇ ಸ್ಥಾನದಲ್ಲಿದೆ. 38 ದೇಶಗಳ ಓಇಸಿಡಿ ದೇಶಗಳ ಪೈಕಿ 2021ರಲ್ಲಿ ಭಾರತೀಯರಿಗೆ ಗರಿಷ್ಠ ಪಾಸ್ ಪೋರ್ಟ್ ನೀಡಿದ ದೇಶಗಳೆಂದರೆ ಅಮೆರಿಕ (56 ಸಾವಿರ), ಆಸ್ಟ್ರೇಲಿಯಾ (24 ಸಾವಿರ) ಮತ್ತು ಕೆನಡಾ (21 ಸಾವಿರ).

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News