ಜ್ಯೋತಿಷಿಯ ಸಲಹೆ ಆಧಾರದಲ್ಲಿ ಭಾರತದ ಫುಟ್ಬಾಲ್ ತಂಡ ಆಯ್ಕೆ ಮಾಡುತ್ತಿರುವ ಮುಖ್ಯ ಕೋಚ್ ಸ್ಟಿಮ್ಯಾಕ್: ವರದಿ

Update: 2023-09-12 15:11 GMT

Igor Stimac with Suni Chhetri, Photo: Instagram 

ಹೊಸದಿಲ್ಲಿ: ಜ್ಯೋತಿಷಿಯ ಸಲಹೆಯ ಆಧಾರದ ಮೇಲೆ ಮುಖ್ಯ ಕೋಚ್ ಇಗೊರ್ ಸ್ಟಿಮ್ಯಾಕ್ ರಾಷ್ಟ್ರೀಯ ಫುಟ್ಬಾಲ್ ತಂಡದ ತಂಡವನ್ನು ಆಯ್ಕೆ ಮಾಡುತ್ತಿದ್ದಾರೆ ಎಂಬ ವರದಿಯು ಭಾರತೀಯ ಕ್ರೀಡಾ ಲೋಕವನ್ನು ಬೆಚ್ಚಿಬೀಳಿಸಿದೆ.

ಸ್ಟಿಮ್ಯಾಕ್ ಅವರು ಜ್ಯೋತಿಷಿಯೊಂದಿಗೆ ಆಟಗಾರರ ಡಾಟಾ ಹಂಚಿಕೊಂಡಿದ್ದಾರೆ.ಜ್ಯೋತಿಷಿಯು ನಿರ್ದಿಷ್ಟ ದಿನಕ್ಕೆ ಯಾರನ್ನು ಆಯ್ಕೆ ಮಾಡಬೇಕು, ಮಾಡಬಾರದು ಎಂದು ತಿಳಿಸುತ್ತಿದ್ದ ಎಂದು ತಿಳಿದುಬಂದಿದೆ.

ಮುಖ್ಯ ಕೋಚ್ ಸ್ಟಿಮ್ಯಾಕ್ ಅವರು ಜ್ಯೋತಿಷಿಯೊಂದಿಗೆ ಸಂಪರ್ಕಕ್ಕೆ ಬರಲು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಕಾರಣರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಭಾರತ ಫುಟ್ಬಾಲ್ ತಂಡವು ಏಶ್ಯನ್ ಕಪ್ ಗೆ ಅರ್ಹತೆ ಪಡೆಯುತ್ತದೆಯೇ ಎಂಬ ಆತಂಕದಲ್ಲಿ, ದಾಸ್, ಜ್ಯೋತಿಷಿಯ ಸಹಾಯವನ್ನು ಕೋರಿದ್ದರು ಹಾಗೂ ತಂಡದ ಮುಖ್ಯ ತರಬೇತುದಾರ ಸ್ಟಿಮ್ಯಾಕ್ ಅವರನ್ನು ಜ್ಯೋತಿಷಿಗೆ ಪರಿಚಯಿಸಿದ್ದರು.

ಆಟಗಾರರ ಹೆಸರುಗಳನ್ನು ಸ್ಟಿಮ್ಯಾಕ್ ಅವರು ಜ್ಯೋತಿಷಿಯೊಂದಿಗೆ ಹಂಚಿಕೊಂಡಾಗ "ಒಳ್ಳೆಯದಿದೆ" "ತುಂಬಾ ಚೆನ್ನಾಗಿ ಆಡಬಹುದು. ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸುವ ಅಗತ್ಯವಿದೆ"; "ಅವನಿಗೆ ಬಹಳ ಒಳ್ಳೆಯ ದಿನವಿದೆ, ಆದರೆ ಆಕ್ರಮಣಕಾರಿಯಾಗಿ ಹೊರಬರಬಹುದು' ಎಂದು ಜ್ಯೋತಿಷಿ ಹೇಳುತ್ತಿದ್ದರು ‘Indian Express’ ವರದಿ ಮಾಡಿದೆ.

ಕಳೆದ ವರ್ಷ ಮೇ ಹಾಗೂ ಜೂನ್ ನಡುವೆ ಸ್ಟಿಮ್ಯಾಕ್ ಹಾಗೂ ಜ್ಯೋತಿಷಿಯ ನಡುವೆ ಸುಮಾರು 100 ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ವರದಿ ಹೇಳುತ್ತದೆ. ಈ ಅವಧಿಯಲ್ಲಿ, ಭಾರತವು ಜೋರ್ಡಾನ್ ಹಾಗೂ ಮೂರು ಏಶ್ಯನ್ ಕಪ್ ಅರ್ಹತಾ ಪಂದ್ಯಗಳಲ್ಲಿ ಕಾಂಬೋಡಿಯಾ, ಅಫ್ಘಾನಿಸ್ತಾನ ಹಾಗೂ ಹಾಂಕಾಂಗ್ ವಿರುದ್ಧ ಸೌಹಾರ್ದ ಪಂದ್ಯವನ್ನು ಆಡಿತು.

ಮೆಸೇಜ್ ಗಳಲ್ಲಿ ತಂಡದಲ್ಲಿನ ಆಯ್ಕೆ ವಿಷಯಗಳ ಕುರಿತು ಮಾತ್ರವಲ್ಲ ಆಟಗಾರರ ಗಾಯದ ಸುದ್ದಿ, ಪರ್ಯಾಯ ತಂತ್ರಗಳ ಕುರಿತು ಸ್ಟಿಮ್ಯಾಕ್ ಅವರು ಜ್ಯೋತಿಷಿಯೊಂದಿಗೆ ಚರ್ಚಿಸಿರುವುದು ಕಂಡುಬಂದಿದೆ.

"ಹಾಯ್ ಪ್ರಿಯ ಭೂಪೇಶ್, ನಿಮ್ಮನ್ನು ಭೇಟಿಯಾಗಲು ಹಾಗೂ ಭವಿಷ್ಯದ ಕೆಲಸಗಳ ಕುರಿತು ಚರ್ಚಿಸಲು ಸಂತೋಷವಾಯಿತು! ಈ ಕೆಳಗಿನ ಆಟಗಾರರ ಬಗ್ಗೆ ಅಭಿಪ್ರಾಯವನ್ನು ನೀಡುವಂತೆ ನಿಮಗೆ ವಿನಂತಿಸುವೆ" ಎಂಬ ಕೋಚ್ ಹಾಗೂ ಜ್ಯೋತಿಷಿ ನಡುವಿನ ಸಂದೇಶವನ್ನು ವರದಿ ಹಂಚಿಕೊಂಡಿದೆ.

ಕೋಚ್ ಸ್ಟಿಮ್ಯಾಕ್ ಗೆ ಜ್ಯೋತಿಷಿಯ ಸಂಪರ್ಕ ಮಾಡಿಸಿದ್ದು ನಾನೇ ಎಂದು ಕುಶಾಲ್ ದಾಸ್ ಒಪ್ಪಿಕೊಂಡಿದ್ದಾರೆ.

"ನಾನು ಜ್ಯೋತಿಷಿಯನ್ನು ಸಭೆಯೊಂದರಲ್ಲಿ ಭೇಟಿಯಾದೆ. ಅವರು (ಶರ್ಮಾ) ಬಹಳಷ್ಟು ಟೆಲಿಕಾಂ ಕಂಪನಿಗಳು ಹಾಗೂ ಬಾಲಿವುಡ್ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರು ಪ್ರಸ್ತುತಪಡಿಸಿದ ಜ್ಯೋತಿಷ್ಯ ಸಮಯ ಆಟಗಾರರಿಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಲು ಸಹಾಯ ಮಾಡುತ್ತದೆ" ಎಂದು ದಾಸ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News