ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ | ಚಿನ್ನದ ಪದಕ ವಿಜೇತ ನವದೀಪ್ ಸಿಂಗ್‌ರ ನೆಚ್ಚಿನ ಕ್ರಿಕೆಟಿಗ ಕೊಹ್ಲಿ, ಧೋನಿ ಅಲ್ಲ!

Update: 2024-09-14 16:28 GMT

ನವದೀಪ್ ಸಿಂಗ್‌(PC:X \ @Gill_era7) , ಕೊಹ್ಲಿ(PTI), ಧೋನಿ(PTI)

ಹೊಸದಿಲ್ಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಎಫ್‌41 ವಿಭಾಗದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ನವದೀಪ್ ಸಿಂಗ್ ರಾತ್ರಿ ಬೆಳಗಾಗುವುದರೊಳಗೆ ತಾರೆಯಾದರು. ಅವರ ವಿಜಯ ಮಾತ್ರವಲ್ಲ, ನಿರಾಶೆಯನ್ನು ಅವರು ಕಟುವಾಗಿ ವ್ಯಕ್ತಪಡಿಸಿದ ರೀತಿ ಮತ್ತು ಅದಕ್ಕಾಗಿ ಬಳಸಿದ ಕಟು ಭಾಷೆಯೂ ಜನರ ಗಮನ ಸೆಳೆಯಿತು.

ನವದೀಪ್ ಮೊದಲು ಗೆದ್ದಿದ್ದು ಬೆಳ್ಳಿ ಪದಕ. ಆದರೆ, ಚಿನ್ನದ ಪದಕ ಗೆದ್ದಿದ್ದ ಇರಾನ್‌ನ ಸದೆಘ್ ಬೈಟ್ ಸಯಾಹ್ ವಿವಾದಾಸ್ಪದ ಧ್ವಜವನ್ನು ಪ್ರದರ್ಶಿಸಿರುವುದಕ್ಕಾಗಿ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿದ ಬಳಿಕ, ಚಿನ್ನದ ಪದಕವನ್ನು ನವದೀಪ್‌ಗೆ ನೀಡಲಾಯಿತು.

ಅವರ ಆಕ್ರಮಣಕಾರಿ ಧೋರಣೆಯನ್ನು ಭಾರತೀಯ ಕ್ರಿಕೆಟ್ ತಂಡದ ಸದಸ್ಯ ವಿರಾಟ್ ಕೊಹ್ಲಿಗೆ ಹೋಲಿಸಲಾಯಿತು. ಆದರೆ, ತಾನು ರೋಹಿತ್ ಶರ್ಮರ ಅಭಿಮಾನಿ ಎಂದು ಇತ್ತೀಚಿನ ಪಾಡ್‌ಕಾಸ್ಟ್ ಒಂದರಲ್ಲಿ ನವದೀಪ್ ಹೇಳಿದ್ದಾರೆ.

ಪಾಡ್‌ಕಾಸ್ಟ್‌ನಲ್ಲಿ, ನೀವು ವಿರಾಟ್ ಕೊಹ್ಲಿಯ ಅಭಿಮಾನಿಯೇ ಅಥವಾ ಮಹೇಂದ್ರ ಸಿಂಗ್ ಧೋನಿಯ ಅಭಿಮಾನಿಯೇ ಎಂದು ಕೇಳಿದಾಗ, ‘‘ನಾನು ರೋಹಿತ್ ಶರ್ಮ ಅಭಿಮಾನಿ’’ ಎಂಬುದಾಗಿ ನವದೀಪ್ ತಣ್ಣಗೆ ಉತ್ತರಿಸಿದರು.

ಈ ಬಗ್ಗೆ ವಿವರಣೆ ನೀಡುವಂತೆ ಕೇಳಿದಾಗ, ನಾನು ರೋಹಿತ್‌ರ ಬ್ಯಾಟಿಂಗನ್ನು, ಅದರಲ್ಲೂ ಮುಖ್ಯವಾಗಿ ಅವರ ದ್ವಿಶತಕದ ಬ್ಯಾಟಿಂಗನ್ನು ಇಷ್ಟಪಡುತ್ತೇನೆ ಎಂದು ಪ್ಯಾರಾಲಿಂಪಿಯನ್ ಹೇಳಿದರು.

ನವದೀಪ್ ಗುರುವಾರ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ನವದೀಪ್ ಪ್ರಧಾನಿಗೆ ಟೋಪಿಯೊಂದನ್ನು ಉಡುಗೊರೆಯಾಗಿ ನೀಡಿದರು. ತಾನು ಜಾವೆಲಿನ್ ಎಸೆಯುವ ಎಡಗೈ ಭಾಗದ ತನ್ನ ಜಾಕೆಟ್‌ನಲ್ಲಿ ಸಹಿ ಹಾಕುವಂತೆಯೂ ಅವರು ಪ್ರಧಾನಿಯನ್ನು ವಿನಂತಿಸಿದರು. ಅದಕ್ಕೆ ಒಪ್ಪಿದ ಪ್ರಧಾನಿ ಅವರ ಎಡಗೈ ಮೇಲೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ, ಅವರ ಆಕ್ರಮಣಶೀಲತೆಯ ಬಗ್ಗೆ ಪ್ರಧಾನಿ ಪ್ರಶ್ನಿಸಿದರು. ‘‘ನಿಮ್ಮ ಆಕ್ರಮಣಶೀಲತೆಯನ್ನು ತೋರಿಸುವ ವೀಡಿಯೊ ಒಂದು ವೈರಲ್ ಆಗಿದೆ. ಅದನ್ನು ನೀವು ನೋಡಿದ್ದೀರಾ, ಇಲ್ಲವಾ? ಇಂಥ ಆಕ್ರಮಣಶೀಲತೆಯೊಂದಿಗೆ ನೀವು ಹೇಗೆ ಸ್ಪರ್ಧಿಸುವುರಿ?’’ ಎಂದು ಮೋದಿ ಕೇಳಿದರು.

ಇದಕ್ಕೆ ಉತ್ತರಿಸಿದ ನವದೀಪ್, ‘‘ಕಳೆದ ಆವೃತ್ತಿಯ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ನಾನು ನಾಲ್ಕನೇ ಸ್ಥಾನ ಗಳಿಸಿದ್ದೆ. ಪ್ಯಾರಿಸ್‌ಗೆ ಪ್ರಯಾಣಿಸುವ ಮೊದಲು, ಚಿನ್ನ ಗೆಲ್ಲುವ ಭರವಸೆಯನ್ನು ನಾನು ನಿಮಗೆ ನೀಡಿದ್ದೆ. ಈಗ ಆ ಭರವಸೆಯನ್ನು ಈಡೇರಿಸಲಾಗಿದೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News