ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಆಗಿ ರಿಕಿ ಪಾಂಟಿಂಗ್ ನೇಮಕ

Update: 2024-09-18 15:23 GMT

 ರಿಕಿ ಪಾಂಟಿಂಗ್ | PC :  X \ Punjab AKings

ಮುಂಬೈ: ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು 2025ರ ಐಪಿಎಲ್‌ಗೆ ವಾಪಸಾಗಲು ಸಜ್ಜಾಗುತ್ತಿದ್ದು, ಈ ಬಾರಿ ಅವರು ಪಂಜಾಬ್ ಕಿಂಗ್ಸ್‌ನ ಮುಖ್ಯ ಕೋಚ್ ಹುದ್ದೆ ನಿರ್ವಹಿಸಲಿದ್ದಾರೆ. ಪಂಜಾಬ್ ಕಿಂಗ್ಸ್ ಬುಧವಾರ ಪಾಂಟಿಂಗ್‌ರನ್ನು ತನ್ನ ಮುಖ್ಯ ಕೋಚ್‌ರನ್ನಾಗಿ ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿದೆ.

2008ರಲ್ಲಿ ಟಿ-20 ಲೀಗ್ ಆರಂಭವಾದ ನಂತರ ಪಂಜಾಬ್ ಕಿಂಗ್ಸ್ ತಂಡವು ಈ ತನಕ ಐಪಿಎಲ್ ಪ್ರಶಸ್ತಿಯನ್ನು ಜಯಿಸಿಲ್ಲ.

ಪಾಂಟಿಂಗ್ ಅವರು ತಮ್ಮದೇ ದೇಶದ, ಇಂಗ್ಲೆಂಡ್‌ನ ಮಾಜಿ ಮುಖ್ಯ ಕೋಚ್ ಟ್ರೆವರ್ ಬೆಲಿಸ್‌ರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ. ಬೆಲಿಸ್ ಕಳೆದ ಎರಡು ಐಪಿಎಲ್ ಋತುಗಳಲ್ಲಿ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿದ್ದರು. ಈ ವೇಳೆ ಮೊಹಾಲಿ ಮೂಲದ ಫ್ರಾಂಚೈಸಿಯು ಪ್ಲೇ ಆಫ್‌ಗೆ ತೇರ್ಗಡೆಯಾಗಲು ವಿಫಲವಾಗಿತ್ತು.

2018ರಲ್ಲಿ ಫ್ರಾಂಚೈಸಿಗೆ ಸೇರ್ಪಡೆಯಾದ ನಂತರ ಆಸ್ಟ್ರೇಲಿಯದ ಲೆಜೆಂಡ್ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಏಳು ವರ್ಷ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2024ರಲ್ಲಿ ಈ ಹುದ್ದೆಯಿಂದ ಕೆಳಗಿಳಿದಿದ್ದರು. ಮೊಹಾಲಿ ಮೂಲದ ತಂಡದೊಂದಿಗೆ ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು ಪಾಂಟಿಂಗ್ ಅವರು ಮೂರು ಐಪಿಎಲ್ ಫ್ರಾಂಚೈಸಿಗಳೊಂದಿಗೆ ಮಾತುಕತೆ ನಡೆಸಿದ್ದರು ಎಂದು ತಿಳಿದುಬಂದಿದೆ.

ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಪಾಂಟಿಂಗ್‌ರ ನೇಮಕಾತಿಯ ಕುರಿತು ಮಾತನಾಡಿದ ಪಂಜಾಬ್ ಕಿಂಗ್ಸ್ ಸಿಇಒ ಸತೀಶ್ ಮೆನನ್, ಮುಂದಿನ 4 ಋತುಗಳ ಕಾಲ ನಮ್ಮ ತಂಡಕ್ಕೆ ಮಾರ್ಗದರ್ಶನ ನೀಡಿ, ಅದನ್ನು ಬೆಳೆಸಲು ರಿಕಿ ಅವರನ್ನು ನೇಮಿಸಿಕೊಂಡಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಮೈದಾನದೊಳಗಿನ ಯಶಸ್ಸಿಗೆ ಪಾಂಟಿಂಗ್ ಅನುಭವ ನಿರ್ಣಾಯಕವಾಗಿದೆ ಎಂದರು.

ಪಾಂಟಿಂಗ್ ಮಾರ್ಗದರ್ಶನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 2020ರಲ್ಲಿ ಮೊದಲ ಬಾರಿ ಐಪಿಎಲ್‌ನಲ್ಲಿ ಫೈನಲ್‌ಗೆ ತಲುಪಿತ್ತು. ಆದರೆ ಮುಂಬೈ ಇಂಡಿಯನ್ಸ್‌ಗೆ ಸೋತಿತ್ತು. 2019, 2020 ಹಾಗೂ 2021 ಸೇರಿದಂತೆ ಒಟ್ಟಾರೆ ಮೂರು ಬಾರಿ ಪ್ಲೇ ಆಫ್‌ಗೆ ತಲುಪಿದೆ. ಈ ಮೊದಲು ಪಾಂಟಿಂಗ್ ಅವರು ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಆಗಿದ್ದರು. ಐಪಿಎಲ್‌ನಲ್ಲಿ 11 ವರ್ಷಗಳ ಕಾಲ ಕೆಲಸ ಮಾಡಿದ ಅಪಾರ ಅನುಭವ ಹೊಂದಿದ್ದಾರೆ. ಈ ವೇಳೆ ಅವರ ಒಂದು ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಲು ಮಾರ್ಗದರ್ಶನ ನೀಡಿದ್ದರು.

ಪಾಂಟಿಂಗ್ 2021ರಿಂದ ಬಿಬಿಎಲ್‌ನಲ್ಲಿ ಹೊಬರ್ಟ್ ಹ್ಯೂರಿಕೇನ್ಸ್‌ನ ರಣನೀತಿಯ ಮುಖ್ಯಸ್ಥರಾಗಿದ್ದರು.

49ರ ಹರೆಯದ ಪಾಂಟಿಂಗ್ ಸದ್ಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ನಡುವೆ ಬ್ರಿಟನ್‌ನಲ್ಲಿ ನಡೆಯುತ್ತಿರುವ ಸೀಮಿತ ಓವರ್ ಸರಣಿಯಲ್ಲಿ ವೀಕ್ಷಕವಿವರಣೆಗಾರನಾಗಿ ಕೆಲಸ ಮಾಡುತ್ತಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News