ಎರಡು ವರ್ಷಗಳ ನಂತರ ಟೆಸ್ಟ್ ಕ್ರಿಕೆಟಿಗೆ ರಿಷಭ್ ಪಂತ್ ಪುನರಾಗಮನ

Update: 2024-09-18 16:09 GMT

ರಿಷಭ್ ಪಂತ್ |  PC : PTI  

ಹೊಸದಿಲ್ಲಿ : ಎರಡು ವರ್ಷಗಳ ವಿರಾಮದ ನಂತರ ರಿಷಭ್ ಪಂತ್ ಟೆಸ್ಟ್ ಕ್ರಿಕೆಟಿಗೆ ಪುನರಾಗಮನಗೈಯುತ್ತಿದ್ದಾರೆ. 2022ರಲ್ಲಿ ಬಾಂಗ್ಲಾದೇಶದ ವಿರುದ್ಧವೇ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು.

ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯವು ಗುರುವಾರ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ಭೀಕರ ಕಾರು ಅಪಘಾತದಲ್ಲಿ ಬದುಕುಳಿದಿರುವ ಪಂತ್ ಅವರು ಕ್ರಿಕೆಟ್ ಮೈದಾನಕ್ಕೆ ವಾಪಸಾಗಿರುವ ಹಾದಿ ಗಮನಾರ್ಹವಾಗಿದೆ. ಎಲ್ಲ ಪ್ರತಿಕೂಲ ಪರಿಸ್ಥಿತಿಯನ್ನು ಮೆಟ್ಟಿ ನಿಂತ ಪಂತ್, ಟೆಸ್ಟ್ ಮಾದರಿಯ ಕ್ರಿಕೆಟ್‌ನಲ್ಲಿ ತನ್ನ ಹಳೆ ಲಯ ಕಂಡುಕೊಳ್ಳಲು ಸಜ್ಜಾಗಿದ್ದಾರೆ.

632 ದಿನಗಳ ನಂತರ ಪಂತ್ ಅವರು ಟೆಸ್ಟ್ ಪಂದ್ಯ ಆಡಲು ಮೈದಾನಕ್ಕೆ ಇಳಿಯಲಿದ್ದಾರೆ. ಕಾಕತಾಳೀಯವೆಂಬಂತೆ ಕೊನೆಯ ಬಾರಿ ಆಡಿದ್ದ ತಂಡವನ್ನೇ ಎದುರಿಸುತ್ತಿದ್ದಾರೆ.

ಇಂಗ್ಲೆಂಡ್ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ವಿಕೆಟ್‌ಕೀಪರ್-ಬ್ಯಾಟರ್ ಧ್ರುವ ಜುರೆಲ್ ಉತ್ತಮ ಪ್ರದರ್ಶನ ನೀಡಿದ್ದರೂ, ತಂಡದಲ್ಲಿ ಪಂತ್ ಉಪಸ್ಥಿತಿಯ ಮಹತ್ವವನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ಒತ್ತಿ ಹೇಳಿದ್ದಾರೆ.

ಬ್ಯಾಟರ್ ಆಗಿ ಅವರು ಎಷ್ಟೊಂದು ಆಕ್ರಮಣಕಾರಿ, ಟೆಸ್ಟ್ ಕ್ರಿಕೆಟಿಗೆ ಅವರು ಏನು ಕೊಡುಗೆ ನೀಡಬಹುದು ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ಅವರಿಗೆ ಮುಕ್ತವಾಗಿ ಆಡಲು ಅವಕಾಶ ನೀಡಿದೆ. ಅವರು ವಿಶ್ವದ ಎಲ್ಲ ಕಡೆಗಳಲ್ಲೂ ರನ್ ಗಳಿಸಿದ್ದಾರೆ. ಅವರು ನಮಗಾಗಿ ಪಂದ್ಯ ಆರಂಭಿಸಬಲ್ಲರು, ಮಾತ್ರವಲ್ಲ ಸಾಕಷ್ಟು ಪ್ರಭಾವ ಬೀರಬಲ್ಲರು ಎಂದು ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಗಂಭೀರ್ ಹೇಳಿದ್ದಾರೆ.

ಇತ್ತೀಚೆಗೆ ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಬಿ ಪರ ಉತ್ತಮ ಪ್ರದರ್ಶನ ನೀಡಿದ್ದ ಪಂತ್ ತಾನು ಟೆಸ್ಟ್ ಕ್ರಿಕೆಟಿಗೆ ಸಜ್ಜಾಗಿದ್ದೇನೆ ಎಂಬುದನ್ನು ಸಾಬೀತುಪಡಿಸಿದ್ದರು. ಆ ಪಂದ್ಯದಲ್ಲಿ ಪಂತ್ ಅವರು 47 ಎಸೆತಗಳಲ್ಲಿ 61 ರನ್ ಗಳಿಸಿದ್ದರು. ವಿಕೆಟ್‌ಕೀಪರ್ ಆಗಿ 7 ಕ್ಯಾಚ್‌ಗಳನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News