ದುಲೀಪ್ ಟ್ರೋಫಿಯಲ್ಲಿ ಶತಕ ಬಾರಿಸಿ ಆಯ್ಕೆಗಾರರ ಗಮನ ಸೆಳೆದ ಇಶಾನ್ ಕಿಶನ್

Update: 2024-09-16 16:12 GMT

ಇಶಾನ್ ಕಿಶನ್ | PC : PTI  

ಮುಂಬೈ : ದುಲೀಪ್ ಟ್ರೋಫಿ ಎರಡನೇ ಸುತ್ತಿನ ಪಂದ್ಯದಲ್ಲಿ ಇಶಾನ್ ಕಿಶನ್ ಭರ್ಜರಿ ಶತಕ ಬಾರಿಸಿದ್ದಾರೆ. ಅವರನ್ನು ಕೊನೆಯ ಕ್ಷಣದಲ್ಲಿ ʼಭಾರತ ಸಿʼ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ತೊಡೆ ನೋವಿನಿಂದ ಬಳಲುತ್ತಿರುವ ಅವರನ್ನು ಮೊದಲ ಸುತ್ತಿನ ದುಲೀಪ್ ಟ್ರೋಫಿ ಪಂದ್ಯದಿಂದ ಹೊರಗಿಡಲಾಗಿತ್ತು.

ʼಭಾರತ ಬಿʼ ವಿರುದ್ಧದ ಪಂದ್ಯದಲ್ಲಿ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ 126 ಎಸೆತಗಳಲ್ಲಿ 111 ರನ್‌ಗಳನ್ನು ಗಳಿಸಿದರು. ಆ ಮೂಲಕ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಗಮನ ಸೆಳೆದರು. ಆ ಪಂದ್ಯವು ಡ್ರಾಗೊಂಡಿತಾದರೂ, ಅವರ ತಂಡವು ಮೂರು ಅಂಕಗಳನ್ನು ಗಳಿಸಿತು.

ಗೆಲುವಿನ ಬಳಿಕ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ‘‘ಅನ್‌ಫಿನಿಶ್ಡ್ ಬಿಝ್ನೆಸ್’’ (ಅಪೂರ್ಣಗೊಂಡಿರುವ ಕೆಲಸಗಳು) ಎಂಬ ನಿಗೂಢ ಸಂದೇಶವೊಂದನ್ನು ಹಾಕಿದ್ದಾರೆ. ಜೊತೆಗೆ ತನ್ನ ಶತಕದ ಇನಿಂಗ್ಸ್‌ ನ ಹಲವು ಚಿತ್ರಗಳನ್ನೂ ಹಾಕಿದ್ದಾರೆ. ಇದು ಅವರು ಭಾರತ ತಂಡಕ್ಕೆ ಮರಳುವ ಸೂಚನೆ ಎಂಬುದಾಗಿ ಅವರ ಅಭಿಮಾನಿಗಳು ವ್ಯಾಖ್ಯಾನಿಸುತ್ತಿದ್ದಾರೆ.

ರಾಷ್ಟ್ರೀಯ ತಂಡದಲ್ಲಿ ಆಡದೆ ಇರುವಾಗ ದೇಶಿ ಪಂದ್ಯಗಳಲ್ಲಿ ಆಡಲು ವಿಫಲವಾಗಿರುವುದಕ್ಕಾಗಿ ಬಿಸಿಸಿಐಯು ಈ ವರ್ಷ ಅವರಿಗೆ ಭಾರತೀಯ ತಂಡದ ಗುತ್ತಿಗೆಯನ್ನು ನಿರಾಕರಿಸಿತ್ತು.

ಅವರು ಭಾರತದ ಪರವಾಗಿ ಕೊನೆಯದಾಗಿ ಆಡಿದ್ದು ಕಳೆದ ವರ್ಷದ ದಕ್ಷಿಣ ಆಫ್ರಿಕ ಪ್ರವಾಸದಲ್ಲಿ. ಆ ಬಳಿಕ, ಮಾನಸಿಕ ಬಳಲಿಕೆಯ ಕಾರಣ ನೀಡಿ ಅವರು ರಾಷ್ಟ್ರೀಯ ತಂಡದ ಆಯ್ಕೆಗೆ ಲಭ್ಯರಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News