ರವೀಂದ್ರ ಜಡೇಜರ ವಿಶೇಷ ಕ್ಲಬ್‌ಗೆ ಅಶ್ವಿನ್ ಸೇರ್ಪಡೆ

Update: 2024-09-19 15:52 GMT

ರವೀಂದ್ರ ಜಡೇಜ ,  ಅಶ್ವಿನ್ | PTI 

ಹೊಸದಿಲ್ಲಿ : ಬಾಂಗ್ಲಾದೇಶ ವಿರುದ್ಧ ಗುರುವಾರ ಚೆನ್ನೈನಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಅಗ್ರ ರ್ಯಾಂಕಿನ ಟೆಸ್ಟ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಅಸಾಧಾರಣ ಸಾಧನೆ ಮಾಡಿದ್ದಾರೆ.

ವಿಶ್ವ ಟೆಸ್ಟ್ಟ್ ಚಾಂಪಿಯನ್‌ಶಿಪ್‌ನಲ್ಲಿ(ಡಬ್ಲ್ಯುಟಿಸಿ) 1,000 ರನ್ ಹಾಗೂ 100 ವಿಕೆಟ್‌ಗಳನ್ನು ಪಡೆದಿರುವ ಕೇವಲ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಅಶ್ವಿನ್ ಈ ಮೂಲಕ ಸಹ ಆಟಗಾರ ರವೀಂದ್ರ ಜಡೇಜ ಅವರನ್ನೊಳಗೊಂಡ ವಿಶೇಷ ಕ್ಲಬ್‌ಗೆ ಸೇರ್ಪಡೆಯಾದರು. ಜಡೇಜ ಈ ವರ್ಷಾರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಈ ಮೈಲಿಗಲ್ಲು ತಲುಪಿದ ಮೊದಲ ಆಟಗಾರ ಎನಿಸಿಕೊಂಡಿದ್ದರು.

ಡಬ್ಲ್ಯುಟಿಸಿ ಇತಿಹಾಸದಲ್ಲಿ 11 ಬೌಲರ್‌ಗಳು 100ಕ್ಕೂ ಅಧಿಕ ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಬೌಲರ್‌ಗಳ ಪೈಕಿ ಜಡೇಜ ಹಾಗೂ ಅಶ್ವಿನ್ ಮಾತ್ರ ಬೌಲಿಂಗ್ ಸಾಧನೆಯ ಜೊತೆಗೆ 1,000 ರನ್ ಗಳಿಸಿ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.

ಆಸ್ಟ್ರೇಲಿಯದ ಸ್ಪಿನ್ನರ್ ನಥಾನ್ ಲಿಯೊನ್ ದಾಖಲೆಯನ್ನು ಮುರಿದು ಡಬ್ಲ್ಯುಟಿಸಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡು ಇತಿಹಾಸ ನಿರ್ಮಿಸುವ ಅವಕಾಶ ಕೂಡ ಅಶ್ವಿನ್‌ಗಿದೆ. ಒಟ್ಟು 187 ವಿಕೆಟ್ ಪಡೆದಿರುವ ಲಿಯೊನ್ ಅವರು ಅಶ್ವಿನ್‌ಗಿಂತ ಕೇವಲ 14 ವಿಕೆಟ್ ಮುಂದಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಪಂದ್ಯವು ಭಾರತದ ಸೂಪರ್‌ಸ್ಟಾರ್ ಅಶ್ವಿನ್‌ಗೆ ತನ್ನ ಅಮೋಘ ಕೌಶಲ್ಯ ಪ್ರದರ್ಶಿಸಿ, ಅಗ್ರ ಸ್ಥಾನ ಪಡೆಯಲು ಇರುವ ಉತ್ತಮ ವೇದಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News