ಚೊಚ್ಚಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದ ದಕ್ಷಿಣ ಆಫ್ರಿಕಾ ಆಟಗಾರ!
ಪಾಕಿಸ್ತಾನ ವಿರುದ್ಧದ ಸೆಂಚೂರಿಯನ್ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕಾರ್ಬಿನ್ ಬಾಷ್ ವಿಶಿಷ್ಟ ಸಾಧನೆ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದರು. ಪಂದ್ಯದಲ್ಲಿ 4 ವಿಕೆಟ್ ಗೊಂಚಲು ಪಡೆದ ಬಾಷ್ 9ನೇ ಕ್ರಮಾಂಕದ ಆಟಗಾರನಾಗಿ ಬ್ಯಾಟಿಂಗ್ಗೆ ಇಳಿದು 81 ರನ್ ಸಿಡಿಸಿದರು. ಇದರಿಂದಾಗಿ 122 ವರ್ಷಗಳ ಹಳೆಯ ದಾಖಲೆ ಪತನಗೊಂಡಿದ್ದು, ನಂ, 8 ಅಥವಾ ಕೆಳ ಕ್ರಮಾಂಕದಲ್ಲಿ ಅತ್ಯಧಿಕ ರನ್ ಗಳಿಸಿದ ಆಫ್ರಿಕಾ ಆಟಗಾರ ಎಂಬ ಹೆಗ್ಗಳಿಕೆಗೆ ಬಾಷ್ ಪಾತ್ರರಾದರು.
ಚೊಚ್ಚಲ ಪಂದ್ಯದಲ್ಲಿ 9ನೇ ಕ್ರಮಾಂಕದ ಆಟಗಾರನೊಬ್ಬ 80ಕ್ಕೂ ಅಧಿಕ ರನ್ ಪಡೆಯುತ್ತಿರುವುದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟಮೊದಲು. ಅಂತೆಯೇ ದಕ್ಷಿಣ ಆಫ್ರಿಕಾ ಪರ ಮೊದಲ ಪಂದ್ಯದಲ್ಲೇ ಅರ್ಧಶತಕ ಹಾಗೂ ನಾಲ್ಕು ವಿಕೆಟ್ ಗಳನ್ನು ಪಡೆದ ಮೊದಲ ಆಟಗಾರ ಎಂಬ ಖ್ಯಾತಿಗೂ ಅವರು ಪಾತ್ರರಾದರು.
ಇದಕ್ಕೂ ಮುನ್ನ ಶ್ರೀಲಂಕಾದ ಮಿಲನ್ ರತ್ನಾಯಕೆ ಚೊಚ್ಚಲ ಪಂದ್ಯದಲ್ಲಿ ಅತ್ಯಧಿಕ ರನ್ ಗಳಿಸಿದ 9ನೇ ಕ್ರಮಾಂಕದ ಬ್ಯಾಟ್ಸ್ಮನ್ ಎನಿಸಿದ್ದರು. 2024ರಲ್ಲಿ ಓಲ್ಡ್ ಟ್ರಾಫರ್ಡ್ನಲ್ಲಿ ಇಂಗ್ಲೆಂಡ್ ವಿರುದ್ಧ ಅವರು 72 ರನ್ ಸಿಡಿಸಿದ್ದರು. 1983ರಲ್ಲಿ ಭಾರತದ ಬಲ್ವಿಂದರ್ ಸಂಧು (71), 1994ರಲ್ಲಿ ಇಂಗ್ಲೆಂಡ್ನ ಡರ್ರೆನ್ ಗಫ್ (65) ಮತ್ತು 2003ರಲ್ಲಿ ದಕ್ಷಿಣ ಆಫ್ರಿಕಾದ ಮೊಂಡ್ ಝೊಂಡಕಿ (59), ಚೊಚ್ಚಲ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದು ಗರಿಷ್ಠ ರನ್ ಗಳಿಸಿದ ಇತರ ಆಟಗಾರರು.
ಚೊಚ್ಚಲ ಪಂದ್ಯ ಆಡಿದ ಕಾರ್ಬಿನ್ ಬಾಶ್ 9ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದು ಅಜೇಯ 81 ರನ್ ಸಿಡಿಸಿ, ಪಾಕಿಸ್ತಾನದ ವಿರುದ್ಧ 90 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆಗೆ ಕಾರಣರಾಗಿದ್ದರು.
ಪಾಕಿಸ್ತಾನದ 211 ರನ್ ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ 301 ರನ್ ಗಳಿಗೆ ಆಲೌಟ್ ಆಯಿತು. 89 ರನ್ ಗಳಿಸಿದ ಆರಂಭಿಕ ಬ್ಯಾಟ್ಸ್ಮನ್ ಏಡನ್ ಮಾಕ್ರಮ್ ಎಂಟನೇ ಆಟಗಾರನಾಗಿ ಔಟ್ ಆದಾಯ ದಕ್ಷಿಣ ಆಫ್ರಿಕಾ ಕೇವಲ 2 ರನ್ ಗಳ ಮುನ್ನಡೆ ಗಳಿಸಿತ್ತು.