ವಸ್ತ್ರ ಸಂಹಿತೆ ಉಲ್ಲಂಘನೆ | ಐದು ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅಗ್ರ ಚೆಸ್ ಕೂಟದಿಂದ ಅನರ್ಹ
ನ್ಯೂಯಾರ್ಕ್: ಐದು ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ FIDE ನ ಡ್ರೆಸ್ ಕೋಡ್ ಉಲ್ಲಂಘಿಸಿ ಜೀನ್ಸ್ ಧರಿಸಿದ್ದಕ್ಕಾಗಿ ದಂಡ ವಿಧಿಸಿ ವಿಶ್ವ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಿಂದ ಅನರ್ಹಗೊಳಿಸಲಾಗಿದೆ.
ವಾಲ್ ಸ್ಟ್ರೀಟ್ ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್ ಭಾಗವಹಿಸಿದ್ದರು. ಪಂದ್ಯಾವಳಿಯ ನಿಯಮಗಳ ಪ್ರಕಾರ ಜೀನ್ಸ್ ಧರಿಸುವುದಕ್ಕೆ ನಿಷೇಧ ಹೇರಲಾಗಿತ್ತು.
ಚೀಫ್ ಆರ್ಬಿಟರ್ ಅಲೆಕ್ಸ್ ಹೊಲೊವ್‌ಜಾಕ್ ಅವರು ಉಡುಪನ್ನು ಬದಲಾಯಿಸುವಂತೆ ವಿನಂತಿಸಿದರೂ ಮ್ಯಾಗ್ನಸ್ ಕಾರ್ಲ್‌ಸೆನ್ ಅದನ್ನು ನಿರಾಕರಿಸಿದರು.
ಪಂದ್ಯಾವಳಿಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹಾಲಿ ಚಾಂಪಿಯನ್ ಕಾರ್ಲ್‌ಸೆನ್‌ಗೆ 200 ಡಾಲರ್ ದಂಡ ವಿಧಿಸಿ ಅವರನ್ನು ಅನರ್ಹಗೊಳಿಸಲಾಯಿತು.
ಇದಕ್ಕೂ ಮೊದಲು, ರಷ್ಯಾದ ಗ್ರ್ಯಾಂಡ್‌ಮಾಸ್ಟರ್ ಇಯಾನ್ ನೆಪೊಮ್ನಿಯಾಚ್ಚಿ ಕೂಡ ಇದೇ ರೀತಿಯ ಉಲ್ಲಂಘನೆಗಾಗಿ ದಂಡ ಕಟ್ಟಿದ್ದರು. ಆದರೆ ಅವರು ತಮ್ಮ ಉಡುಪನ್ನು ಬದಲಾಯಿಸುವ ಮೂಲಕ ಪಂದ್ಯಾವಳಿಯಲ್ಲಿ ಮುಂದುವರಿಯುವ ಅವಕಾಶ ಪಡೆದರು.