ನಿತೀಶ್ ಕುಮಾರ್ ರೆಡ್ಡಿ ಅಮೋಘ ಶತಕ; ವಾಶಿಂಗ್ಟನ್ ಸುಂದರ್ ಅರ್ಧ ಶತಕ
ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನ ಮೂರನೇ ದಿನವಾದ ಶನಿವಾರ ಭಾರತದ ನಿತೀಶ್ ಕುಮಾರ್ ರೆಡ್ಡಿ (105 ಅಜೇಯ) ಅಮೋಘ ಶತಕವೊಂದನ್ನು ಬಾರಿಸಿದ್ದಾರೆ. ಭಾರತದ ಮೊದಲ ಇನಿಂಗ್ಸ್‌ನಲ್ಲಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ರೆಡ್ಡಿ ಸುದೀರ್ಘ ಇನಿಂಗ್ಸೊಂದನ್ನು ಆಡಿ ತಂಡವನ್ನು ತಕ್ಷಣದ ಅಪಾಯದಿಂದ ಪಾರುಮಾಡಿದರು. ತಂಡಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗಿದ್ದ ಸ್ಥಿರತೆಯನ್ನು ನೀಡಿ ಮೊತ್ತವನ್ನು ಹಿಗ್ಗಿಸಿದರು.
ಅವರಿಗೆ ಸಮರ್ಥ ಜೊತೆ ನೀಡಿದವರು ಒಂಭತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಇಳಿದ ವಾಶಿಂಗ್ಟನ್ ಸುಂದರ್ (50). ಸುಂದರ್ ಅರ್ಧ ಶತಕವೊಂದನ್ನು ಬಾರಿಸಿದರು.
ಮೂರನೇ ದಿನದ ಅಂತಿಮ ಅವಧಿಯ ಆಟದ ವೇಳೆ, 99ರಲ್ಲಿದ್ದ ರೆಡ್ಡಿ ಬೌಂಡರಿಯೊಂದನ್ನು ಬಾರಿಸುವ ಮೂಲಕ ತನ್ನ ಚೊಚ್ಚಲ ಅಂತರ್‌ರಾಷ್ಟ್ರೀಯ ಶತಕವನ್ನು ಪೂರ್ಣಗೊಳಿಸಿದರು.
ಇದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಪೆವಿಲಿಯನ್‌ನಲ್ಲಿ ಕುಳಿತು ರೆಡ್ಡಿಯ ಆಟವನ್ನು ನೋಡುತ್ತಿದ್ದ ತಂದೆ ಆನಂದಭಾಷ್ಪವನ್ನು ಸುರಿಸುತ್ತಾ ದೇವರಿಗೆ ಕೈಮುಗಿದರು. ಬಳಿಕ ಪೆವಿಲಿಯನ್‌ಗೆ ಮರಳಿದ ನಿತೀಶ್‌ರನ್ನು ಆಸ್ಟ್ರೇಲಿಯದ ಆಟಗಾರರು ಅಭಿನಂದಿಸಿದರು ಮತ್ತು ಭಾರತೀಯ ಪಾಳಯವು ಎದ್ದುನಿಂತು ಚಪ್ಪಾಳೆ ತಟ್ಟಿತು.
ಮಳೆ ಮತ್ತು ಮಂದ ಬೆಳಕಿನಿಂದಾಗಿ ಮೂರನೇ ದಿನದಾಟ ಬೇಗನೇ ಮುಗಿದಾಗ ನಿತೀಶ್ 176 ಎಸೆತಗಳಲ್ಲಿ 59.66ರ ಸರಾಸರಿಯಲ್ಲಿ 105 ರನ್‌ಗಳನ್ನು ಗಳಿಸಿದ್ದರು. ಅವರ ಇನಿಂಗ್ಸ್‌ನಲ್ಲಿ 10 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇದ್ದವು. ವಾಶಿಂಗ್ಟನ್ ಸುಂದರ್ 162 ಎಸೆತಗಳಲ್ಲಿ 50 ರನ್‌ಗಳನ್ನು ಮಾಡಿದರು.
ಟೆಸ್ಟ್ ಕ್ರಿಕೆಟ್‌ನ 147 ವರ್ಷಗಳ ಇತಿಹಾಸದಲ್ಲಿ, ಇನಿಂಗ್ಸೊಂದರಲ್ಲಿ 8 ಮತ್ತು 9ನೇ ಕ್ರಮಾಂಕದ ಬ್ಯಾಟರ್‌ಗಳು ತಲಾ 150ಕ್ಕಿಂತಲೂ ಅಧಿಕ ಎಸೆತಗಳನ್ನು ಎದುರಿಸಿರುವುದು ಇದೇ ಮೊದಲು ಎಂದು ಅಧಿಕೃತ ಪ್ರಸಾರಕರು ಹೇಳಿದ್ದಾರೆ.
ಅದೂ ಅಲ್ಲದೆ, ಆಸ್ಟ್ರೇಲಿಯದಲ್ಲಿ ಚೊಚ್ಚಲ ಶತಕ ಬಾರಿಸಿದ ಮೂರನೇ ಅತಿ ಕಿರಿಯ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನೂ ರೆಡ್ಡಿ ಪಡೆದಿದ್ದಾರೆ. ಮೊದಲ ಎರಡು ಸ್ಥಾನಗಳಲ್ಲಿ ಸಚಿನ್ ತೆಂಡುಲ್ಕರ್ ಮತ್ತು ರಿಶಭ್ ಪಂತ್ ಇದ್ದಾರೆ.
ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಸಚಿನ್ ತೆಂಡುಲ್ಕರ್ 1992ರಲ್ಲಿ, 18 ವರ್ಷ 256 ದಿನಗಳಾಗಿದ್ದಾಗ ಆಸ್ಟ್ರೇಲಿಯದಲ್ಲಿ ತನ್ನ ಚೊಚ್ಚಲ ಶತಕ ಬಾರಿಸಿದ್ದರು. ವಿಕೆಟ್‌ಕೀಪರ್-ಬ್ಯಾಟರ್ ರಿಶಭ್ ಪಂತ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 2019ರಲ್ಲಿ, 21 ವರ್ಷ 92 ದಿನಗಳಾಗಿದ್ದಾಗ ಸಿಡ್ನಿಯಲ್ಲಿ ತನ್ನ ಚೊಚ್ಚಲ ಶತಕ ಸಿಡಿಸಿದ್ದರು. ನಿತೀಶ್ ಈ ಸಾಧನೆಯನ್ನು 21 ವರ್ಷ ಮತ್ತು 216 ದಿನಗಳಾಗಿದ್ದಾಗ ಮಾಡಿದ್ದಾರೆ.
ನಿತೀಶ್ ಮತ್ತು ಸುಂದರ್ 8ನೇ ವಿಕೆಟ್‌ಗೆ 127 ರನ್‌ಗಳನ್ನು ಸೇರಿಸಿದರು. ಆ ಮೂಲಕ ಭಾರತೀಯ ಇನಿಂಗ್ಸನ್ನು ತಕ್ಷಣದ ಅಪಾಯದಿಂದ ಪಾರು ಮಾಡಿದರು.