ಬಾರ್ಡರ್-ಗಾವಸ್ಕರ್ ಟ್ರೋಫಿ | ನಿತೀಶ್ ಕುಮಾರ್ ರೆಡ್ಡಿ-ವಾಷಿಂಗ್ಟನ್ ಸುಂದರ್ ಪ್ರತಿ ಹೋರಾಟ: ಫಾಲೋ ಆನ್ ತಪ್ಪಿಸಿಕೊಂಡ ಭಾರತ
ಮೆಲ್ಬೋರ್ನ್: ಇಲ್ಲಿನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಬಾಕ್ಸಿಂಗ್ ಡೇ ಕ್ರಿಕೆಟ್ ನ ಮೂರನೆ ದಿನದಾಟದಲ್ಲಿ ಭಾರತದ ಆಲ್ ರೌಂಡರ್ ಗಳಾದ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ತೋರಿದ ಪ್ರತಿ ಹೋರಾಟದಿಂದ ಭಾರತ ತಂಡ ಫಾಲೋ ಆನ್ ಭೀತಿಯಿಂದ ಪಾರಾಗಿದೆ. ಟೀ ವಿರಾಮದ ವೇಳೆಗೆ ಭಾರತ ತಂಡವು 7 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದೆ.
ನಿನ್ನೆ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ, ಫಾಲೋ ಆನ್ ಭೀತಿಗೆ ಒಳಗಾಗಿದ್ದ ಭಾರತ ತಂಡ, ಇಂದು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾರನ್ನು ಬಹುಬೇಗನೆ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಸೂಚನೆ ನೀಡಿತ್ತು. ಆದರೆ, ಈ ಹಂತದಲ್ಲಿ ಜೊತೆಯಾದ ಆಲ್ ರೌಂಡರ್ ಗಳಾದ ನಿತೀಶ್ ಕುಮಾರ್ ರೆಡ್ಡಿ (ಅಜೇಯ 85) ಹಾಗೂ ವಾಷಿಂಗ್ಟನ್ ಸುಂದರ್ (ಅಜೇಯ 40) ಮುರಿಯದ ಎಂಟನೆ ವಿಕೆಟ್ ಜೊತೆಯಾಟದಲ್ಲಿ 105 ರನ್ ಗಳನ್ನು ಕಲೆ ಹಾಕಿ, ಭಾರತವನ್ನು ಫಾಲೋ ಆನ್ ನಿಂದ ಪಾರು ಮಾಡಿದರು.
ತಾಳ್ಮೆ ಮತ್ತು ಆಕ್ರಮಣಕಾರಿಮಿಶ್ರಿತ ಬ್ಯಾಟಿಂಗ್ ಪ್ರದರ್ಶಿಸಿದ ನಿತೀಶ್ ರೆಡ್ಡಿ, 119 ಬಾಲ್ ಗಳಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 85 ರನ್ ಗಳಿಸಿ, ಶತಕದತ್ತ ದಾಪುಗಾಲು ಹಾಕಿದ್ದಾರೆ. ಮತ್ತೊಂದೆಡೆ ರಕ್ಷಣಾತ್ಮಕ ಆಟವಾಡಿದ ವಾಷಿಂಗ್ಟನ್ ಸುಂದರ್, 115 ಬಾಲ್ ಗಳಲ್ಲಿ ಒಂದು ಬೌಂಡರಿ ನೆರವಿನಿಂದ ಅಜೇಯ 40 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ.
ನಿತೀಶ್ ಕುಮಾರ್ ರೆಡ್ಡಿಗೆ ತಮ್ಮ ಚೊಚ್ಚಲ ಶತಕ ಪೂರೈಸಲು ಇನ್ನೂ 15 ರನ್ ಗಳ ಅಗತ್ಯವಿದ್ದರೆ, ವಾಷಿಂಗ್ಟನ್ ಸುಂದರ್ ತಮ್ಮ ಅರ್ಧ ಶತಕಕ್ಕೆ 10 ರನ್ ಗಳಿಂದ ದೂರವಿದ್ದಾರೆ.
ಆಸ್ಟ್ರೇಲಿಯ ತಂಡದ ಪರ ಕೇವಲ 49 ರನ್ ನೀಡಿ ಮೂರು ಪ್ರಮುಖ ವಿಕೆಟ್ ಗಳನ್ನು ಕಿತ್ತ ಸ್ಕಾಟ್ ಬೋಲಂಡ್ ಯಶಸ್ವಿ ಬೌಲರ್ ಆದರು. ಉಳಿದಂತೆ ಪ್ಯಾಟ್ ಕಮಿನ್ಸ್ 2 ವಿಕೆಟ್ ಹಾಗೂ ನಥಾನ್ ಲಿಯೋನ್ ಒಂದು ವಿಕೆಟ್ ಪಡೆದರು.