45 ಎಸೆತಗಳಲ್ಲಿ ಮಯಾಂಕ್ ಅಗರವಾಲ್ ಶತಕ; 14.2 ಓವರ್‌ನಲ್ಲೇ ಪಂದ್ಯ ಗೆದ್ದ ಕರ್ನಾಟಕ
Update: 2024-12-28 15:02 GMT
ಅಹಮದಾಬಾದ್ : ಕರ್ನಾಟಕ ತಂಡವು ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಮ್ ನಲ್ಲಿ ಅರುಣಾಚಲ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಜಯ ಗಳಿಸಿದೆ.
ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಗೆಲುವಿನ ಓಟ ಮುಂದುವರಿದಿದ್ದು, 14.2 ಓವರ್‌ನಲ್ಲೇ ಗೆಲ್ಲುವ ಮೂಲಕ ಸತತ ನಾಲ್ಕನೇ ಜಯ ಗಳಿಸಿದೆ.
45 ಎಸೆತದಲ್ಲೇ ಶತಕ ದಾಖಲಿಸುವ ಮೂಲಕ ನಾಯಕ ಮಯಂಕ್ ಅಗರವಾಲ್ ಸತತ ಎರಡನೇ ಶತಕ ಬಾರಿಸಿದರು. ಮಯಂಕ್ ಇನಿಂಗ್ಸ್‌ನಲ್ಲಿ ತಲಾ ಏಳು ಸಿಕ್ಸರ್ ಹಾಗೂ ಬೌಂಡರಿಗಳು ಸೇರಿದ್ದವು. ಮಯಂಕ್‌ಗೆ ತಕ್ಕ ಸಾಥ್ ನೀಡಿದ ಅಭಿನವ್ ಮನೋಹರ್ 66 ರನ್ ಗಳಿಸಿ ಅಜೇಯರಾಗುಳಿದರು.
ವಿ ಕೌಶಿಕ್ (30ಕ್ಕೆ 4) ಹಾಗೂ ಹಾರ್ದಿಕ್ ರಾಜ್ (30ಕ್ಕೆ 4) ದಾಳಿಗೆ ತತ್ತರಿಸಿದ ಅರುಣಾಚಲ ಪ್ರದೇಶ 43.2 ಓವರ್‌ಗಳಲ್ಲಿ 166 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಅರುಣಾಚಲದ ಪರ ಏಕಾಂಗಿ ಹೋರಾಟ ತೋರಿದ ಅಭಿನವ್ ಸಿಂಗ್ 71 ರನ್ ಗಳಿಸಿ ಔಟಾಗದೇ ಉಳಿದರು.