ಭಾರತ 369ಕ್ಕೆ ಆಲೌಟ್: ಆಸೀಸ್ ಬಿಗಿ ಹಿಡಿತ

Update: 2024-12-29 02:39 GMT

PC: x.com/BCCI

ಮೆಲ್ಬೋರ್ನ್: ಬಾರ್ಡರ್- ಗಾವಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ತಂಡ ಪ್ರವಾಸಿ ಭಾರತವನ್ನು 369 ರನ್ಗಳಿಗೆ ನಿಯಂತ್ರಿಸಿ 103 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದೆ. ಭೋಜನ ವಿರಾಮದ ವೇಳೆಗೆ ಎರಡನೇ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದ ಆಸ್ಟ್ರೇಲಿಯಾ 8 ವಿಕೆಟ್ ಗಳನ್ನು ಕೈಯಲ್ಲಿ ಹೊಂದಿ 158 ರನ್ ಮುನ್ನಡೆ ಪಡೆದಿದ್ದು, ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಬಿಗಿ ಹಿಡಿತ ಸಾಧಿಸಿದೆ.

ಇದಕ್ಕೂ ಮುನ್ನ ನಿನ್ನೆಯ ಮೊತ್ತಕ್ಕೆ 13 ರನ್ ಗಳನ್ನು ಸೇರಿಸುವಷ್ಟರಲ್ಲಿ  ನಿತೀಶ್ ರೆಡ್ಡಿ (114) ಅವರನ್ನು ಕಳೆದುಕೊಂಡ ಭಾರತ 369 ರನ್ ಗಳಿಗೆ ಆಲೌಟ್ ಆಯಿತು. ಲಿಯಾನ್ ಬೌಲಿಂಗ್ ನಲ್ಲಿ ಮಿಚೆಲ್ ಸ್ಟಾರ್ಕ್ ಅವರು ಹಿಡಿದ ಕ್ಯಾಚ್ ಗೆ ರೆಡ್ಡಿ ಬಲಿಯಾದರು. 4 ರನ್ ಗಳಿಸಿದ ಮೊಹ್ಮದ್ ಸಿರಾಜ್ ಅಜೇಯರಾಗಿ ಉಳಿದರು.

ಎರಡನೇ ಇನಿಂಗ್ಸ್ ನಲ್ಲಿ ಭಾರತದ ಬೌಲರ್ಗಳು ಮೊನಚಿನ ದಾಳಿಯೊಂದಿಗೆ ಎದುರಾಳಿಗಳಿಗೆ ಕಡಿವಾಣ ಹಾಕಿದರು. ತಂಡದ ಮೊತ್ತ 20 ರನ್ಗಳಾಗುವಷ್ಟರಲ್ಲಿ ಬೂಮ್ರಾ, ಚೊಚ್ಚಲ ಪಂದ್ಯವಾಡುತ್ತಿರುವ ಸ್ಯಾಮ್ ಕೊನ್ಸ್ಟಾಸ್ ಅವರನ್ನು ಬೌಲ್ಡ್ ಮಾಡಿದರು. ತಂಡದ ಮೊತ್ತಕ್ಕೆ ಮತ್ತೆ 23 ರನ್ ಗಳು ಸೇರುವಷ್ಟರಲ್ಲಿ ಮೊಹ್ಮದ್ ಸಿರಾಜ್ ಬೌಲಿಂಗ್ ನಲ್ಲಿ ಉಸ್ಮಾನ್ ಖ್ವಾಜಾ ಬೌಲ್ಡ್ ಆದರು.

ಭೋಜನ ವಿರಾಮದ ವೇಳೆಗೆ ಮರ್ನೂಸ್ ಲಂಚುಶೇನ್(20) ಮತ್ತು ಸ್ಟೀವನ್ ಸ್ಮಿತ್ (2) ವಿಕೆಟ್ ಕಾಯ್ದುಕೊಂಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಲು ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News