ಚಾಂಪಿಯನ್ಸ್ ಟ್ರೋಫಿ ತಯಾರಿ ವೀಕ್ಷಿಸಲು ಪಾಕಿಸ್ತಾನಕ್ಕೆ ತೆರಳಿದ ಐಸಿಸಿ ನಿಯೋಗ
ಲಾಹೋರ್ : ಮುಂದಿನ ವರ್ಷ ಫೆಬ್ರವರಿ 19ರಿಂದ ಮಾರ್ಚ್ 9ರ ತನಕ ನಡೆಯಲಿರುವ ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕೆ ಪಾಕಿಸ್ತಾನವು ಸಜ್ಜಾಗುತ್ತಿದೆ.
ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ)ಐವರು ಸದಸ್ಯರ ನಿಯೋಗವು ಮಂಗಳವಾರ ರಾತ್ರಿ ಕರಾಚಿಗೆ ತಲುಪಿದೆ. ಜಾಗತಿಕ ಕ್ರಿಕೆಟ್ ಮೇಳಕ್ಕೆ ಪಾಕಿಸ್ತಾನದ ಸಿದ್ಧತೆಯ ಬಗ್ಗೆ 4 ದಿನಗಳ ಕಾಲ ಪರಿಶೀಲನೆ ನಡೆಸಲಿದೆ.
ಈವೆಂಟ್ ಮ್ಯಾನೇಜ್‌ಮೆಂಟ್, ಸೆಕ್ಯುರಿಟಿ, ಕ್ರಿಕೆಟ್ ಕಾರ್ಯಾಚರಣೆಗಳ ಪರಿಣಿತರನ್ನು ಒಳಗೊಂಡಿರುವ ಐಸಿಸಿ ತಂಡವು ಮೂರು ಗೊತ್ತುಪಡಿಸಿದ ಸ್ಥಳಗಳಾದ-ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣ, ರಾವಲ್ಪಿಂಡಿಯ ಕ್ರಿಕೆಟ್ ಸ್ಟೇಡಿಯಮ್ ಹಾಗೂ ಲಾಹೋರ್‌ನ ಗಡಾಫಿ ಸ್ಟೇಡಿಯಮ್‌ಗಳಲ್ಲಿ ನಿಖರವಾದ ತಪಾಸಣೆ ನಡೆಸಲಿದೆ.
ಐಸಿಸಿ ನಿಯೋಗವು ಕ್ರೀಡಾಂಗಣದ ಸೌಲಭ್ಯಗಳು, ಅಭ್ಯಾಸದ ಪ್ರದೇಶಗಳು ಹಾಗೂ ಆಟಗಾರರು ಹಾಗೂ ಅಧಿಕಾರಿಗಳಿಗೆ ಮೀಸಲಿಟ್ಟ ಹೋಟೆಲ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಿದೆ. ಪ್ರಮುಖ ಪಂದ್ಯಾವಳಿಯು ನಿರೀಕ್ಷಿತ ಉನ್ನತ ಮಟ್ಟವನ್ನು ಪೂರೈಸುವುದನ್ನು ಖಚಿತಪಡಿಸಲಿದೆ.
ಚಾಂಪಿಯನ್ಸ್ ಟ್ರೋಫಿಗೆ 65 ಮಿಲಿಯನ್ ಡಾಲರ್ ಬಜೆಟ್‌ಗೆ ಐಸಿಸಿ ಅನುಮೋದನೆ ನೀಡಿದೆ. ಪಿಸಿಬಿ ಈಗಾಗಲೇ 8 ತಂಡಗಳ ಪಂದ್ಯಾವಳಿಯ ಕರಡು ವೇಳಾಪಟ್ಟಿಯನ್ನು ಸಲ್ಲಿಸಿದೆ. ಭಾರತದ ಭಾಗವಹಿಸುವಿಕೆ ಇನ್ನೂ ಖಾತ್ರಿಯಾಗದ ಕಾರಣ ವೇಳಾಪಟ್ಟಿ ಇನ್ನೂ ಅಂತಿಮವಾಗಿಲ್ಲ.
ಒಂದು ವೇಳೆ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರೆ, ಐಸಿಸಿ ಹಾಗೂ ಪಿಸಿಬಿ ಹೈಬ್ರಿಡ್ ಮಾದರಿಯನ್ನು ಪರಿಗಣಿಸುವ ಅಗತ್ಯವಿದೆ. ಈ ಮಾದರಿಯ ಪ್ರಕಾರ ಕೆಲವು ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ. ಕಳೆದ ವರ್ಷ ಏಶ್ಯನ್ ಕಪ್‌ನಲ್ಲೂ ಹೀಗೆಯೇ ಮಾಡಲಾಗಿತ್ತು.