ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿ | ನಾಳೆ ಭಾರತ-ದಕ್ಷಿಣ ಕೊರಿಯಾ ನಡುವೆ ಸೆಮಿಫೈನಲ್
ಬೀಜಿಂಗ್ : ಚೀನಾದಲ್ಲಿ ನಡೆಯುತ್ತಿರುವ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯ ಸೆಮಿಪೈನಲ್‌ನಲ್ಲಿ ಸೋಮವಾರ ಫೆವರೀಟ್ ಭಾರತವು ದಕ್ಷಿಣ ಕೊರಿಯವನ್ನು ಎದುರಿಸಲಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತವು ಈ ಪಂದ್ಯಾವಳಿಯಲ್ಲಿ ಈವರೆಗೆ ಅತ್ಯುತ್ತಮ ನಿರ್ವಹಣೆಯನ್ನು ನೀಡಿದೆ. ಅದು ತಾನು ಆಡಿರುವ ಎಲ್ಲಾ ಐದು ಲೀಗ್ ಹಂತದ ಪಂದ್ಯಗಳನ್ನು ಗೆದ್ದಿದೆ.
ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡವು ತನ್ನ ಅಭಿಯಾನವನ್ನು ಆತಿಥೇಯ ಚೀನಾ ವಿರುದ್ಧದ 3-0 ಗೋಲುಗಳ ಅಂತರದ ಗೆಲುವಿನೊಂದಿಗೆ ಆರಂಭಿಸಿತ್ತು. ಬಳಿಕ ಜಪಾನ್ ಮತ್ತು ಮಲೇಶ್ಯವನ್ನು ಕ್ರಮವಾಗಿ 5-1 ಮತ್ತು 8-1 ಗೋಲುಗಳ ಅಂತರದಿಂದ ಹಿಮ್ಮೆಟ್ಟಿಸಿದೆ.
ಬಳಿಕ ಭಾರತವು ದಕ್ಷಿಣ ಕೊರಿಯವನ್ನು 3-1 ಗೋಲುಗಳಿಂದ ಹಾಗೂ ಅಂತಿಮವಾಗಿ ಪಾಕಿಸ್ತಾನವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿದೆ.
ಫಾರ್ವರ್ಡ್‌ಲೈನ್, ಮಿಡ್‌ಫೀಲ್ಡ್ ಮತ್ತು ಡಿಫೆನ್ಸ್ ಸೇರಿದಂತೆ ಆಟದ ಎಲ್ಲಾ ಕ್ಷೇತ್ರಗಳಲ್ಲಿ ಈವರೆಗೆ ಭಾರತದ ನಿರ್ವಹಣೆಯು ಅತ್ಯುತ್ತಮವಾಗಿದೆ. ಆದರೆ, ಸ್ಟ್ರೈಕರ್‌ಗಳು ಅವರೆಲ್ಲರಿಗಿಂತಲೂ ಒಂದು ಕೈ ಮಿಗಿಲು ಎಂಬಂತೆ ನಿರ್ವಹಣೆಯನ್ನು ನೀಡಿದ್ದಾರೆ.
ಪ್ರಸಕ್ತ ಜಗತ್ತಿನ ಶ್ರೇಷ್ಠ ಡ್ರ್ಯಾಗ್‌ಫ್ಲಿಕರ್‌ಗಳ ಪೈಕಿ ಒಬ್ಬರಾಗಿರುವ ನಾಯಕ ಹರ್ಮನ್‌ಪ್ರೀತ್ ಸಿಂಗ್ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಅವರು ತನ್ನ ಉತ್ತಮ ಪ್ರದರ್ಶನವನ್ನು ಇಲ್ಲಿಯೂ ಮುಂದುವರಿಸಿದ್ದಾರೆ. ಅವರು ಈ ಪಂದ್ಯಾವಳಿಯಲ್ಲಿ ಈವರೆಗೆ ಐದು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದ್ದಾರೆ.
ಸೋಮವಾರ ನಡೆಯಲಿರುವ ಇನ್ನೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನವು ಆತಿಥೇಯ ಚೀನಾವನ್ನು ಎದುರಿಸಲಿದೆ. ಫೈನಲ್ ಪಂದ್ಯವು ಮಂಗಳವಾರ ನಡೆಯಲಿದೆ.