ಲಾವೋಸ್‌ನಲ್ಲಿ ಅಸುರಕ್ಷಿತ, ಅಕ್ರಮ ಕೆಲಸಗಳ ಆಮಿಷ | 17 ಭಾರತೀಯ ನಾಗರಿಕರ ರಕ್ಷಣೆ
ಹೊಸದಿಲ್ಲಿ: ಲಾವೋಸ್‌ನಲ್ಲಿ ಅಸುರಕ್ಷಿತ ಮತ್ತು ಅಕ್ರಮ ಕೆಲಸದಲ್ಲಿ ತೊಡಗಿಕೊಳ್ಳಲು ಆಮಿಷವೊಡ್ಡಲ್ಪಟ್ಟ 17 ಭಾರತೀಯ ಕೆಲಸಗಾರರನ್ನು ರಕ್ಷಿಸಲಾಗಿದ್ದು ಅವರು ಸ್ವದೇಶಕ್ಕೆ ವಾಪಸಾಗುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಇಂದು ಹೇಳಿದ್ದಾರೆ. ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ ಲಾವೋಸ್‌ನ ಭಾರತೀಯ ದೂತಾವಾಸವನ್ನೂ ಅವರು ಶ್ಲಾಘಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಸಚಿವರು “ಮೋದಿ ಕಿ ಗ್ಯಾರಂಟಿ ಸ್ವದೇಶ ಮತ್ತು ವಿದೇಶದಲ್ಲಿ ಎಲ್ಲರಿಗೂ ಕೆಲಸ ಮಾಡುತ್ತದೆ. ಲಾವೋಸ್‌ನಲ್ಲಿ ಅಸುರಕ್ಷಿತ ಮತ್ತು ಅಕ್ರಮ ಕೆಲಸದ ಆಮಿಷವೊಡ್ಡಲ್ಪಟ್ಟ 17 ಭಾರತೀಯ ಕೆಲಸಗಾರರು ವಾಪಸಾಗುತ್ತಿದ್ದಾರೆ. ಲಾವೋಸ್ ದೂತಾವಾಸ ಒಳ್ಳೆಯ ಕೆಲಸ ಮಾಡಿದೆ. ಲಾವೋ ಪ್ರಾಧಿಕಾರಗಳ ಸಹಕಾರಕ್ಕೂ ಧನ್ಯವಾದಗಳು,” ಎಂದು ಅವರು ಬರೆದಿದ್ದಾರೆ.
ಕ್ಯಾಂಬೋಡಿಯಾದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ನೀಡುವುದಾಗಿ ಭರವಸೆ ನೀಡುವ ಮಾನವ ಕಳ್ಳಸಾಗಣಿಕೆದಾರರ ವಿರುದ್ಧ ಎಚ್ಚರಿಕೆಯಿಂದಿರುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾರತೀಯರಿಗೆ ಸಲಹೆ ನೀಡಿದೆ.
ಈ ರೀತಿಯ ಜಾಲಕ್ಕೆ ಬಲಿಯಾದವರನ್ನು ಆನ್‌ಲೈನ್ ವಂಚನೆ ಮತ್ತು ಇತರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಬಲವಂತಪಡಿಸಲಾಗುತ್ತದೆ. ಕ್ಯಾಂಬೋಡಿಯಾಗೆ ತೆರಳುವ ಭಾರತೀಯ ನಾಗರಿಕರು ಎಚ್ಚರಿಕೆಯಿಂದಿರಬೇಕು. ತಮ್ಮ ಉದ್ಯೋಗದಾತರ ಹಿನ್ನೆಲೆಗಳನ್ನು ಪರಿಶೀಲಿಸಬೇಕು,” ಎಂದು ಸಚಿವಾಲಯ ಹೇಳಿದೆ.